‘ಹೊಸ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಿ’
ಬೆಳಗಾವಿ 06: ವಿದ್ಯಾರ್ಥಿಗಳು ಕರ್ತವ್ಯ ಪ್ರಜ್ಞೆ, ಶ್ರದ್ಧೆ, ನಿಷ್ಠೆ ಬೆಳೆಸಿಕೊಳ್ಳಬೇಕು. ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು. ಸಕಾರಾತ್ಮಕ ಭಾವನೆಯಿಂದ ಪ್ರಯತ್ನಿಸಬೇಕು. ಹೊಸ ತಂತ್ರಜ್ಞಾನ ಸದುಪಯೋಗದಿಂದ ಜ್ಞಾನವರ್ಧನೆ ಮಾಡಿಕೊಂಡು ಬೆಳೆಯಬೇಕು” ಎಂದು ಡೆಕ್ಕನ್ ಮೆಡಿಕಲ್ ಸೆಂಟರಿನ ನಿರ್ದೇಶಕಿ ಡಾ.ಸಾವಿತ್ರಿ ದೊಡ್ಡಣ್ಣವರ ನುಡಿದರು. ಅವರು ಇಲ್ಲಿ ನಿನ್ನೆ ನಡೆದ ಎಸ್.ಪಿ.ಎಚ್. ಭರತೇಶ ಕನ್ನಡ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಹಿತೋಪದೇಶ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಜೇಂದ್ರ ರಾಮಗೌಂಡಾ ಅವರು ಸತತ ಪರಿಶ್ರಮ, ಸಮಯಪ್ರಜ್ಞೆ, ಕ್ರಿಯಾಶೀಲತೆ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಕರೆ ಕೊಟ್ಟರು. ಎ.ಎ.ಸನದಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕಿಶನ ಮೂಲ್ಯ, ಬಸವರಾಜ ಹಿರೇಹೊಳಿ, ಶ್ರೀ ಕರೆಗಾರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರಾದ ಅಶ್ವಿನಿ, ಸವಿತಾ ಹಾಗೂ ಮುಖ್ಯಾಧ್ಯಾಪಕ ಭರತೇಶ ಮಾರಣಬಸರಿ ಮಾತನಾಡಿದರು. ತರುಣ ಕುಂಬಾರ ವಂದಿಸಿದರು. ಅದಿತಿ ಹಾಗೂ ಶ್ರೇಯಾ ನಿರೂಪಿಸಿದರು.