ಕಲಾವಿದರ ತವರೂರು ನಾಗಾವಿ: ಕೃಷ್ಣಗೌಡ ಪಾಟೀಲ
ಗದಗ 20: ಮಹರ್ಷಿ ನಾಗಾರ್ಜುನರಿಂದ ಹೆಸರು ಪಡೆದಿರುವ ನಾಗಾವಿ ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ವೀರಗಾಸೆ, ಡೊಳ್ಳಿನ ಕುಣಿತ, ಭಜನೆ, ಪುರಾಣ ಪ್ರವಚನಗಳು ಈ ಗ್ರಾಮದಲ್ಲಿ ಮೇಳೈಸಿವೆ. ಸಿದ್ದ ಪುರುಷರು ನಡೆದಾಡಿದ ಈ ಪುಣ್ಯಭೂಮಿಯು ಕಲಾವಿದರ, ಸಾಧಕರ ತವರೂರಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.
ನಾಗಾವಿ ಗ್ರಾಮದಲ್ಲಿ ಶ್ರೀಯಲ್ಲಮ್ಮದೇವಿಯ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ, ಶ್ರೀಮಾರುತಿ ನಾಟ್ಯ ಸಂಘದವರು ಏರಿ್ಡಸಿದ್ದ ಗುಣವಂತ ಅಣ್ಣ ಮತೀಹೀನ ತಮ್ಮ ಎಂಬ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ನಾಗಾವಿ ಗ್ರಾಮದಲ್ಲಿ ಪ್ರತಿವರ್ಷ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ನಾಟಕದ ಕಥೆ ಅಥವಾ ಸಾರಾಂಶವನ್ನು ನೋಡಿದಾಗ, ಮನೆಯಲ್ಲಿ ಸಹೋದರರು ಯಾವರೀತಿ ನಡೆದುಕೊಳ್ಳಬೇಕು ಎಂಬುದು ತಿಳಿಯುತ್ತದೆ. ಪ್ರತಿ ವರ್ಷ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ನಾಟಕ ಆಡದಿದ್ದರೆ, ಅದು ನಾಗಾವಿಯ ಜಾತ್ರೆ ಅನಿಸುವದಿಲ.್ಲ ಕಷ್ಟ ಸುಖ ಏನೇ ಇದ್ದರೂ, ಇಲ್ಲಿಯ ಕಲಾವಿದರು ಒಗ್ಗೂಡಿಕೊಂಡು ಪ್ರತಿ ವರ್ಷ ನಾಟಕವನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದರು.
ಜ್ಯೋತಿ ಬೆಳಗಿಸುವ ಮೂಲಕ ನಾಟಕಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡರಾದ ಬಿ.ಬಿ. ಅಸೂಟಿ ಮಾತನಾಡಿ, ಕಲೆ ಎಂಬುದು ಯಾರ ಸ್ವತ್ತೂ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುತ್ತದೆ. ಅದನ್ನು ತೋರಿಸಲು ಮುಂದೆ ಬರಬೇಕು ಅದನ್ನು ನಾಗಾವಿ ಗ್ರಾಮದಲ್ಲಿ ತೋರಿ್ಡಸುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಬಿ.ಆರ್. ದೇವರೆಡ್ಡಿ ಮಾತನಾಡಿ, ಪ್ರತಿಯೊಂದು ನಾಟಕವು ಮನುಷ್ಯನ ಜೀವನದಲ್ಲಿ ನಡೆಯುವ ಘಟನೆಗಳೇ ಇರುತ್ತವೆ. ನಾಟಕದಲ್ಲಿ ಬರುವ ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದ್ದನ್ನು ಬಿಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕೊಟ್ಟೂರುಸ್ವಾಮಿ ಬೂದಗುಂಪ ಶಾಖಾ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ರಂಗಭೂಮಿ ಅಳಿವಿನ ಅಂಚಿನಲ್ಲಿದೆ. ಅದರೆ, ನಾಗಾವಿ ಗ್ರಾಮದಲ್ಲಿ ಕಲೆ, ಕಲಾ ಆರಾಧಕರು ಇದ್ದಾರೆ. ಕಲೆಯನ್ನು ಮುಂದುರೆಸುವ ಶಕ್ತಿ ಇಲ್ಲಿದೆ ಎಂದರು.
ವೇ.ಮೂ. ಕರಬಸಯ್ಯ ಹಿರೇಮಠ ಸಮ್ಮುಖ ವಹಿಸಿದ್ದರು.
ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಕೆ.ಎಂ.ಎಫ್. ನಿರ್ದೇಶಕರಾದ ಎಚ್.ಜಿ. ಹಿರೇಗೌಡ್ರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮುಖಂಡರಾದ ಐ.ಬಿ. ಬಿಂಕದಕಟ್ಟಿ, ಡಿ.ಎಸ್. ಶಿದ್ನೆಕೊಪ್ಪ, ಜಿ.ಬಿ. ಕುಷ್ಟರೆಡ್ಡಿ, ಕೆ.ಎಂ. ಗೋವಿಂದರೆಡ್ಡಿ, ಎ.ಆರ್. ಮರಿಹನಮರೆಡ್ಡಿ, ಜಿ.ಎಚ್. ಮೊರಬರೆಡ್ಡಿ, ಎಫ್.ಎಚ್. ಮರಡ್ಡಿ, ದಯಾನಂದ ಪವಾರ, ಅಜ್ಜಣ್ಣ ಹುಗ್ಗೇನವರ, ಎಂ.ಬಿ. ಮರಡ್ಡಿ, ಮಂಜಪ್ಪ ಹವಳಪ್ಪನವರ, ಸತ್ಯಪ್ಪ ತಾಮ್ರಗುಂಡಿ, ಮೃತ್ಯಂಜಯಪ್ಪ ಹಟ್ಟಿ, ಗೋವಿಂದಗೌಡ ಭರಮಗೌಡ್ರ, ಹನಮರೆಡ್ಡಿ ಸಿದ್ನೆಕೊಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುರೇಶ ಪವಾರ ಉಪಾಧ್ಯಕ್ಷರಾದ ಶ್ರೀಮತಿ ಸುಮಾ ತಳವಾರ, ಗ್ರಾಪಂ ಸದಸ್ಯರಾದ ಯು.ಬಿ. ಶಿಗ್ಲಿ, ಎಚ್.ಎಚ್. ನದಾಫ್, ಪಾರವ್ವ ಗೊರವರ, ಎಸ್.ಕೆ. ಮೊರಬರೆಡ್ಡಿ, ಎಚ್.ಎಂ. ಸಿದ್ನೆಕೊಪ್ಪ, ಸೋಮಪ್ಪ ಪವಾರ, ಕುಬೇರ್ಪ ರಾಠೋಡ, ಗೌರಿ ತೋಟದ ಮುಂತಾದವರು ಉಪಸ್ಥಿತರಿದ್ದರು.
ಎಸ್.ಎಸ್. ತಳವಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ. ಸಿದ್ನೇಕೊಪ್ಪ ವಂದಿಸಿದರು.
ಬಳಿಕ ಪ್ರದರ್ಶನಗೊಂಡ ಗುಣವಂತ ಅಣ್ಣ ಮತೀಹೀನ ತಮ್ಮ ಎಂಬ ನಾಟಕ ಜನಮನ ಸೆಳೆಯಿತು.