ಯುಬಿಎಸ್ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ನಿಮಿತ್ತ ಹಮ್ಮಿಕೊಂಡ ಆಚರಣೆ

Celebration of Savitribai Phule's birth anniversary at UBS School

ಯುಬಿಎಸ್ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ನಿಮಿತ್ತ ಹಮ್ಮಿಕೊಂಡ ಆಚರಣೆ 

ತಾಂಬಾ 03: ಹೆಣ್ಣು ಮಕ್ಕಳು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟಗಳನ್ನು ಲೆಕ್ಕಿಸದೆ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. 

       ಶುಕ್ರವಾರದಂದು ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ನಿಮಿತ್ತ ಹಮ್ಮಿಕೊಂಡ 'ಆಧುನಿಕ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ' ಕುರಿತ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಿತ್ರಿಬಾಯಿ ಫುಲೆ ಭಾರತದ ಮೊಟ್ಟಮೊದಲ ಶಿಕ್ಷಕಿ. ಸಾಮಾಜಿಕ-ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೊತಿಬಾ ಫುಲೆ ಅವರ ಜೊತೆಗೂಡಿ ಅನೇಕ ಶಾಲೆಗಳನ್ನು ಸ್ಥಾಪಿಸಿದ, ಆಧುನಿಕ ಶಿಕ್ಷಣದ ಜನನಿಯ ಜೀವನಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

        ಹಿರಿಯ ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗೊಸ್ಕರ ​‍್ರ​‍್ರಥಮವಾಗಿ ಶಾಲೆಗಳನ್ನು ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಎಲ್ಲರಿಗೂ ವಿದ್ಯೆ ಸಿಗಬೇಕೆಂಬ ಅವರ ದೂರದೃಷ್ಟಿ ಇಂದಿಗೂ ಪ್ರಸ್ತುತವೆನಿಸುತ್ತದೆ ಎಂದು ಹೇಳಿದರು. 

         ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಗ್ರಾಮಸ್ಥರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು