ವಿಕಸಿತ ಭಾರತದ ಮೂಲಕ ದೇಶದ ಅಭಿವೃದ್ದಿ: ಸಚಿವ ಶೇಖಾವತ್
ಕಾರವಾರ 21 :-ಭಾರತವು ತನ್ನ ವೈಭವದ ಇತಿಹಾಸವನ್ನು ಪುನಃ ಬರೆಯಲಿದ್ದು, ಪ್ರಧಾನ ಮಂತ್ರಿಯವರ ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಭಾರತವು ತನ್ನ ವೈಭವದ ಭೂತಕಾಲ ಮತ್ತು ಇತಿಹಾಸದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅಭಿವೃದ್ಧಿಯತ್ತ ನಡೆದಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು ಅವರು ಬುಧವಾರ ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್‌ವಿ ಕೌಂಡಿನ್ಯ ಹಡಗು ಲೋಕಾರೆ್ಣ ಮಾಡಿ ಮಾತನಾಡಿದರು. ಭಾರತವು ಅದ್ಭುತವಾದ ಇತಿಹಾಸ ಹೊಂದಿದ್ದು, ಸಾವಿರಾರು ವರ್ಷಗಳ ಕಾಲ, ಭಾರತದ ಸಂಪತ್ತು, ಜ್ಞಾನ, ವಿಜ್ಞಾನವು ಅಗಾಧವಾಗಿದ್ದು, ಜ್ಞಾನ ಮತ್ತು ವಿಜ್ಞಾನದ ದೃಷ್ಟಿಕೋನದಿಂದ ಇಡೀ ಜಗತ್ತಿಗೆ ಆಕರ್ಷಣೀಯ ಕೇಂದ್ರವಾಗಿತ್ತು. ಭಾರತವನ್ನು ತಿಳಿದುಕೊಳ್ಳಲು, ಗುರುತಿಸಲು, ನೋಡಲು, ಭಾರತದಿಂದ ಕಲಿಯಲು ವಿಶ್ವದ ಅನೇಕ ಜನರು ಭಾರತಕ್ಕೆ ಬಂದರು. ಸಾವಿರಾರು ವರ್ಷಗಳ ದಾಳಿಗಳು ಮತ್ತು ಪ್ರಯತ್ನಗಳ ಹೊರತಾಗಿಯೂ, ನಮ್ಮ ಶ್ರೇಷ್ಠ ಸಂಸ್ಕೃತಿ ಕೊನೆಗೊಂಡಿಲ್ಲ. ಶಾಶ್ವತವಾಗಿದ್ದ ಆ ಪ್ರಭಾವವನ್ನು ಮುರಿಯಲು, ಆ ಪ್ರಭಾವವನ್ನು ಕೊನೆಗೊಳಿಸಲು, ಸಾಧ್ಯವಾಗಲಿಲ್ಲ ಇದು ನಮ್ಮ ಸಂಸ್ಕೃತಿಯ ಮೇಲೆ ನಾವು ಹೆಮ್ಮೆಪಡುವ ಸಂಗತಿಯಾಗಿದೆ ಎಂದರು. ಭಾರತದ ಪ್ರಗತಿಯನ್ನು ತಡೆಯಲು, ಭಾರತದಲ್ಲಿ ಅಶಾಂತಿ ಹರಡಲು ಮತ್ತು ನಮ್ಮನ್ನು ನೈತಿಕವಾಗಿ ಕೆಳಕ್ಕೆ ಇಳಿಸಲು ಯೋಜಿತ ಉದ್ದೇಶದಿಂದ ಕೆಲವು ಜನರು ಕೆಲವು ಘಟನೆಗಳನ್ನು ನಡೆಸುತ್ತಾರೆ ಕಳೆದ ಕೆಲವು ದಿನಗಳಲ್ಲಿ ಅಂತಹ ಘಟನೆಗಳು ನಮ್ಮ ಮುಂದೆ ನಡೆದಿವೆ, ಇತ್ತಿಚಿಗೆ ಪೆಹಲ್ಗಾಮನಲ್ಲಿ ನಡೆದ ಭಯೋತ್ಪಾದಕರದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನಾ ಪಡೆಗಳ ಮೂರು ವಿಭಾಗಗಳು ಒಟ್ಟಾಗಿ ಸೇರಿ, ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿದೆ. ಭಾರತೀಯ ಸೇನೆಯು ತನ್ನ ಶಕ್ತಿ, ಭದ್ರತೆ ಮತ್ತು ಕೌಶಲ್ಯಪೂರ್ಣ ಸಂಯೋಜನೆಯನ್ನು ಪ್ರದರ್ಶಿಸಿದೆ. ಇದನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಭಾರತವು ಎಲ್ಲಾ ಭಯೋತ್ಪಾದಕರನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಂಡಿದೆ ಮತ್ತು ಪ್ರಪಂಚದ ಯಾವುದೇ ದೇಶದಲ್ಲಿ ಭಾರತದ ನೆಲದ ವಿರುದ್ಧ ಯಾವುದೇ ಪಿತೂರಿ ನಡೆಯುತ್ತಿದ್ದರೆ, ಆ ಪಿತೂರಿಯನ್ನು ಕೊನೆಗೊಳಿಸುವ ಮತ್ತು ಅದನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದರು. ಭಾರತದಲ್ಲಿ 5 ನೇ ಶತಮಾನದಲ್ಲಿ ಇದ್ದಂತಹ ಹಡಗನ್ನು , ನಮ್ಮ ಭಾರತದ ಇತಿಹಾಸದ ಸಾಧನೆಯ ಪ್ರತೀಕವಾಗಿ ಸ್ಥಳೀಯವಾಗಿ ದೊರೆಯುವ ಅಗತ್ಯ ಪರಿಕರಗಳನ್ನು ಬಳಸಿಕೊಂಡು ಶತಮಾನಗಳ ಹಿಂದೆ ನಮ್ಮ ಪೂರ್ವಜರು ತಯಾರಿಸಿದ್ದ ಹಡಗನ್ನು ಮರು ನಿರ್ಮಾಣ ಮಾಡಿ, ಕಾರವಾರದ ನೌಕಾನೆಲೆಯಲ್ಲಿ ಅದರ ಸಂಚಾರಕ್ಕೆ ಚಾಲನೆ ನೀಡಿರುವುದು ಐತಿಹಾಸಿಕ ಕ್ಷಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರ ಸಂಜಯ ಸಾನಿಯಾಲ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವೈಸ್ ಅಡ್ಮಿರಲ್ ರಾಜಾರಾಮ ಸ್ವಾಮಿನಾಥನ್ ರಿಯರ್ ಅಡ್ಮಿರಲ್ ಕೆ.ಎಂ ರಾಮಕೃಷ್ಣನ್, ನಿವೃತ್ತ ಚೀಪ್ ಅಡ್ಮಿರಲ್ ಕರಣಬೀರ್ ಸಿಂಗ್ ಮತ್ತಿತರರು ಇದ್ದರು.