ಬಗರ್‌ಹುಕಮ್ ಸಾಗುಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ರೈತರ ಪ್ರತಿಭಟನೆ

Farmers' protest demanding that rights be given to bagarhukam cultivators

 ಬಗರ್‌ಹುಕಮ್ ಸಾಗುಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ರೈತರ ಪ್ರತಿಭಟನೆ 

ಗದಗ 13: ಗದಗ ಜಿಲ್ಲೆಯ ಕಪ್ಪತಗುಡ್ಡ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದಲ್ಲಿ ಬೆಳಗಾವ ಸುವರ್ಣಸೌಧದ ಎದುರಿಗೆ ಜರುಗುತ್ತಿರುವ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲು ಹೊರಟ ಬಗರ್‌ಹುಕುಂ ಸಾಗುವಳಿದಾರರು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಶಂಕರಗೌಡ್ರು, ಪದಾಧಿಕಾರಿಗಳಾದ ಶಿವಯೋಗಯ್ಯ ಶಶಿಮಠ, ಬಸವರಾಜ ವಡ್ಡರ, ಶರಣಪ್ಪ ಕಟ್ಟಿಮನಿ ಹಾಗೂ ಗದಗ ಜಿಲ್ಲಾ ಬಗರ್‌ಹುಕುಂ ಸಾಗುವಳಿದಾರರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಕೆಲ ಹೊತ್ತು ರೈತಪರ ಘೋಷಣೆಗಳನ್ನು ಕೂಗಿದರು.   

 ಗದಗ ಜಿಲ್ಲೆಯ ಅರಣ್ಯ ಅಧಿಕಾರಿಗಳ ಕರಾಳ ಕಾನೂನಿಗೆ ದಿಕ್ಕಾರ ಕೂಗಿದರಲ್ಲದೇ, ಸರ್ಕಾರ ಕೂಡಲೇ ಬಗರ್‌ಹುಕಮ್ ಸಾಗುಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು. ಗದಗ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಬಗರ್‌ಹುಕುಂ ಸಾಗುವಳಿದಾರರು ಕೆಲ ಹೊತ್ತು ಧರಣಿ ನಡೆಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯರೈತ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶಂಕರಗೌಡ ಜಾಯನಗೌಡ್ರು ಮಾತನಾಡಿ, ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ಅವೈಜ್ಞಾನಿಕವಾಗಿ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಿದ್ದು, ಬಗರ್‌ಹುಕುಂ ಸಾಗುವಳಿ ಮಾಡುವ ಬಡ ರೈತರಿಗೆ, ಕುರಿ ಸಾಕಾಣಿಕೆದಾರರರಿಗೆ, ಪಶು ಸಾಕಾಣಿಕೆದಾರರಿಗೆ ಮಾರಕವಾಗಲಿದ್ದು, ಬಗರ್‌ಹುಕುಂ ಸಾಗುವಳಿದಾರರು ಗುಳೇ ಹೋಗುವ ಸರದಿ ಬರುತ್ತದೆ. ಅರಣ್ಯ ಇಲಾಖೆಯವರ ಕರಾಳ ಕಾನೂನನ್ನು ತೆಗೆದು ಅರಣ್ಯ ಸಾಗುವಳಿ ಮಾಡಿದವರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು. 

ರೈತ ಸಂಘದ ಮುಂಡರಗಿ ತಾಲೂಕ ಸಂಚಾಲಕರಾದ ಬಸವರಾಜ ವಡ್ಡರ ಮಾತನಾಡಿ, ಸರ್ಕಾರ ವನ್ಯಜೀವಿ ಅಭಯಾರಣ್ಯದ ಆದೇಶವನ್ನು ಹಿಂಪಡೆದು ಅಕ್ರಮ ಅರಣ್ಯ ಸಾಗುವಳಿದಾರರನ್ನು ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.  

ಗದಗ ಜಿಲ್ಲಾ ಬಗರ್‌ಹುಕುಂ ಸಾಗುವಳಿದಾರರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ   ಮಾತನಾಡಿ, ಗದಗ ಜಿಲ್ಲೆಯ ಕಪ್ಪತಗುಡ್ಡ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಬಗರ್‌ಹುಕುಂ  ಸಾಗುಳಿದಾರರಿದ್ದು, ಅವರಲ್ಲಿ ಕೇವಲ 800 ಜನರನ್ನು ಪುರಸ್ಕರಿಸಿದ್ದು ಕಂಡು ಬಂದಿದೆ. ಏಳು ಸಾವಿರ ಬಗರ್‌ಹುಕುಂ ಸಾಗುವಳಿದಾರರನ್ನು ತಿರಸ್ಕರಿಸಿದ್ದಾರೆ. ಕೂಡಲೇ ಸರ್ಕಾರ ಗದಗ ಜಿಲ್ಲೆಯ ಡೋಣಿ, ಡಂಬಳ, ದಿಂಡೂರು, ಅತ್ತಿಕಟ್ಟಿ, ಗುಡ್ಡದ ಬೂದಿಹಾಳ, ಸಿಂಗಟರಾಯನಕೇರಿ, ಮುರುಡಿ, ವರವಿ, ಜೆಲ್ಲಿಗೇರಿ, ಕಡಕೋಳ, ಸೊರಟೂರ, ಮಜ್ಜೂರ, ಛಬ್ಬಿ, ಅಕ್ಕಿಗುಂದ, ಶೆಟ್ಟಿಕೇರಿ, ಪರಸಾಪುರ, ಮಾಗಡಿ ಮುಂತಾದ ಕಡೆ ಇರುವ ಬಗರ್‌ಹುಕುಂ ಸಾಗುವಳಿದಾರರು ಗದಗ ಜಿಲ್ಲೆಯ ಅರಣ್ಯ ಇಲಾಖೆಯವರ ಕರಾಳ ಕಾನೂನಿಗೆ ಬಲಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಸರ್ಕಾರ ಕೂಡಲೇ ಮೀನಮೇಷ ಮಾಡದೇ, ರೈತ ದಂಗೆ ಆಗುವ ಪೂರ್ವದಲ್ಲಿ ತಲೆ ತಲಾಂತರಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡಲೇಬೇಕೆಂದು ಒತ್ತಾಯಿಸಿದರು. 

ರೈತ ಸಂಘ, ಹಾಗೂ ಬಗರ್‌ಹುಕುಂ ಸಾಗುವಳಿದಾರರ ಮುಖಂಡರಾದ ಹಾಸಿಮಪ್ಪ ಶಿರಹಟ್ಟಿ, ಮಂಜು ಬುರ್ಲಿ, ರಾಯಪ್ಪ ಹಾವಿನ, ಫಕೀರ​‍್ಪ ಕುಲಮರ, ಬೀರ​‍್ಪ ಲಮಾಣಿ, ಶರಣಪ್ಪ ಬ್ಯಾಳಿ, ಕೇಶವ್ ರಾಟೋಡ, ತಿಮ್ಮಣ್ಣ ವಡ್ಡರ, ಮುತ್ತಣ್ಣ ವಡ್ಡರ ಸೇರಿದಂತೆ ನೂರಾರು ರೈತರು, ಬಗರ್‌ಹುಕುಂ ಸಾಗುವಳಿದರು ಉಪಸ್ಥಿತರಿದ್ದರು. 

ಸಿಎಂಗೆ ಪ್ರತ್ಯೇಕ ಮನವಿ: 

ಬೆಳಗಾಂ ಸುವರ್ಣಸೌಧ ಎದುರಿಗೆ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ರೈತಪರ ಹೋರಾಟದಲ್ಲಿ ಗದಗ ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರು ಸರಕಾರ ತಮಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.  

ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಶಂಕರಗೌಡ್ರು, ಪದಾಧಿಕಾರಿಗಳಾದ ಶಿವಯೋಗಯ್ಯ ಶಶಿಮಠ, ಬಸವರಾಜ ವಡ್ಡರ, ಶರಣಪ್ಪ ಕಟ್ಟಿಮನಿ ಹಾಗೂ ಗದಗ ಜಿಲ್ಲಾ ಬಗರ್‌ಹುಕುಂ ಸಾಗುವಳಿದಾರರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಪಾಲ್ಗೊಂಡ  ಗದಗ ಜಿಲ್ಲೆಯ ನೂರಾರು ಬಗರ್‌ಹುಕುಂ ಸಾಗುವಳಿದಾರರು ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ, ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ತಮಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ, ಪ್ರತ್ಯೇಕ ಮನವಿಯನ್ನು ಅರ​‍್ಿಸಿದರು.