ಯತ್ನಾಳ್ ಉಚ್ಚಾಟನೆ ಖಂಡಿಸಿ ಮಿಣಜಗಿ ಗ್ರಾಮಸ್ಥರಿಂದ ಪ್ರತಿಭಟನೆ

Minajagi villagers protest against Yatnal's eviction

ಯತ್ನಾಳ್ ಉಚ್ಚಾಟನೆ ಖಂಡಿಸಿ ಮಿಣಜಗಿ ಗ್ರಾಮಸ್ಥರಿಂದ ಪ್ರತಿಭಟನೆ  

ತಾಳಿಕೋಟಿ 01: ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಖಂಡಿಸಿ ತಾಲೂಕಿನ ಮಿಣಜಗಿ ಗ್ರಾಮಸ್ಥರು ಹಾಗೂ ಯತ್ನಾಳ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  

ಮಂಗಳವಾರ ತಾಳಿಕೋಟಿ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಯತ್ನಾಳರ ಅಪಾರ ಅಭಿಮಾನಿಗಳು ಗ್ರಾಮದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಅಲ್ಲಿಂದ ಗ್ರಾಮ ಪಂಚಾಯಿತಿ ಮಾರ್ಗ, ಚೆನ್ನಮ್ಮ ವೃತ್ತ, ಸಂತ ಸೇವಾಲಾಲ ದೇವಸ್ಥಾನದ ಮೂಲಕ ಹಾಯ್ದು ನಂತರ ಮತ್ತೆ ಚೆನ್ನಮ್ಮ ವೃತ್ತಕ್ಕೆ ತಲುಪಿದರು. ಚೆನ್ನಮ್ಮ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಕೆಲಹೊತ್ತು ರಸ್ತಾ ರೂಕೋ ನಡೆಸಿ, ಯತ್ನಾಳ ಪರ ಘೋಷಣೆ ಕೂಗಿ ಅವರ ಉಚ್ಚಾಟನೆ ನಿರ್ಧಾರವನ್ನು ಖಂಡಿಸಿದರು.  

ನಂತರ ಅಲ್ಲಿಯೇ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಯತ್ನಾಳ ಅವರ ಶ್ರಮ ಅಪಾರವಾಗಿದೆ. ಅವರೊಬ್ಬ ಜನನಾಯಕ, ಬಿಜೆಪಿ ಕಾರ್ಯಕರ್ತರನ್ನು, ಬಿಜೆಪಿ ಕಟ್ಟಿ ಬೆಳೆಸಿದವರನ್ನು ಕೈ ಬಿಡಬಾರದು, ನಿನ್ನೆ ಮೊನ್ನೆ ಪಕ್ಷಕ್ಕೆ ಬಂದ ತಾಲೂಕಿನ ನಾಯಕರೊಬ್ಬರು ಅವರ ಕುರಿತು ಹಗುರವಾಗಿ ಮಾತನಾಡಿದ್ದಾರೆ, ಅವರ ಕೆಟ್ಟ ವ್ಯಕ್ತಿತ್ವದಿಂದಾಗಿ ಅವರು ಈಗ ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು, ಯತ್ನಾಳರ ಕುರಿತು ಮಾತನಾಡುವಷ್ಟು ಯೋಗ್ಯತೆ ಅವರಿಗಿಲ್ಲ. ಯತ್ನಾಳ ಗೌಡರು ಈ ರಾಜ್ಯ ಕಂಡ ಧೀಮಂತ ನಾಯಕ ಎಂಬುದು ಎಲ್ಲರಿಗೂ ಗೊತ್ತು ಎಂದರು.  

ಮುಖಂಡ ಮಡುಸಾಹುಕಾರ ಬಿರಾದಾರ ಮಾತನಾಡಿ ಹಿಂದುತ್ವವನ್ನೇ ಉಸಿರಾಗಿಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದೂಗಳು ಸಂಕಷ್ಟದಲ್ಲಿದ್ದಾಗ ಧೈರ್ಯ ತುಂಬುವ ಜೊತೆಗೆ ಅವರ ನೆರವಿಗೆ ನಿಲ್ಲುತ್ತಾರೆ, ಅವರ ಉಚ್ಚಾಟನೆ ಹಿಂದೂತ್ವವನ್ನೇ ಪಕ್ಷದಿಂದ ಹೊರ ಹಾಕಿದಂತಾಗಿದೆ. ಇದರ ಆಧಾರದಲ್ಲಿಯೇ ಬಿಜೆಪಿ ರಾಷ್ಟ್ರ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಬಿಜೆಪಿಯ ವರಿಷ್ಠರು ರಾಜ್ಯದ ಅಧ್ಯಕ್ಷರು ಹಿರಿಯರು ಈ ನಿರ್ಧಾರದ ಕುರಿತು ಮರುಪರೀಶೀಲನೆ ನಡೆಸಬೇಕು ಇಲ್ಲದಿದ್ದರೆ ಲಕ್ಷಾಂತರ ಕಾರ್ಯಕರ್ತರು ಬೀದಿಗಿಳಿದು ಹೋರಾಟವನ್ನು ನಡೆಸುತ್ತಾರೆ ಎಂದರು.  

ಪುರಸಭೆ ಮಾಜಿ ಸದಸ್ಯ ಸುರೇಶ ಹಜೇರಿ, ಮಹಾಂತೇಶ ಮುರಾಳ, ಗುರ​‍್ಪಗೌಡ ಪಾಟೀಲ, ಜಿ.ಎಂ.ಪಾಟೀಲ ಮಾತನಾಡಿ ಯತ್ನಾಳರ ಉಚ್ಚಾಟನೆಯನ್ನು ಉಗ್ರವಾಗಿ ಖಂಡಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಯತ್ನಾಳರ ಅಭಿಮಾನಿಗಳಾದ ಶರಣು ಬಾಗೇವಾಡಿ, ಮಲ್ಲನಗೌಡ ಬಿರಾದಾರ, ಮಲ್ಲನಗೌಡ ಪ್ಯಾಟನ್, ಪುನೀತಗೌಡ ಬಿರಾದಾರ, ಶ್ರೀಶೈಲ ಹಡಪದ, ಕೆ.ಎ.ಪಾಟೀಲ, ಸಿ.ಬಿ.ರೂಡಗಿ, ಜಗು ಕವಿತಾಳ, ಗುರ​‍್ಪಗೌಡ ಬಿ. ಪಾಟೀಲ, ಬಸನಗೌಡ ಬಿರಾದಾರ, ಈರಯ್ಯ ಹಿರೇಮಠ, ಪ್ರಭುಗೌಡ ಪಾಟೀಲ ಬಳಗಾನೂರ, ತಾಳಿಕೋಟಿ, ಬಳಗಾನೂರ, ಮಡಿಕೆಶ್ವರ, ಕುಂಟೋಜಿ, ಹಿರೂರ ಹಾಗೂ ಕೂಚಬಾಳ ಗ್ರಾಮಗಳ ಯತ್ನಾಳ ಅಭಿಮಾನಿಗಳು ಭಾಗವಹಿಸಿದ್ದರು.