ಎನ್‌ಎಸ್‌ಎಸ್ ತರಬೇತಿ ಕೇವಲ ಒಂದು ಕಾರ್ಯಕ್ರಮವಾಗದೆ ಯುವಜನತೆಯ ಜೀವನದ ಪ್ರಮುಖ ಅಂಗವಾಗಬೇಕು : ಡಾ. ಜಮಾದಾರ
ವಿಜಯಪುರ 25: ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಕೋಮು ಮತ್ತು ಜಾತಿ ಭೇದದ ಸಮಸ್ಯೆಗಳಿಂದ ದೇಶದ ಪ್ರಗತಿ ಕುಂಠಿತವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಎನ್‌ಎಸ್‌ಎಸ್ ತರಬೇತಿ ಕೇವಲ ಒಂದು ಕಾರ್ಯಕ್ರಮವಾಗಿರದೆ, ಯುವಜನತೆಯ ಜೀವನದ ಪ್ರಮುಖ ಅಂಗವಾಗಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸಂಘದ ಅಧ್ಯಕ್ಷ ಡಾ. ಜಾವೀದ ಜಮಾದಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎನ್.ಎಸ್.ಎಸ್ ಸ್ನಾತಕ ‘ಬ’ ಹಾಗೂ ಮುಕ್ತ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಂಮಾರಂಭದಲ್ಲಿ ಅವರು ಮಾತನಾಡಿದರು.
ಚಿಕ್ಕ ಚಿಕ್ಕ ಸೇವೆಗಳೂ ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂಬ ಅರಿವು ಮೂಡಿಸುತ್ತವೆ. ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸ್ವಚ್ಛತೆ, ಸಹಬಾಳ್ವೆ, ಸಮಾನತೆ ಮತ್ತು ಸಾಮಾಜಿಕ ಪ್ರಗತಿಗೆ ತೊಡಗಿಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಬಸವೇಶ್ವರ, ಏಸು ಕ್ರಿಸ್ತ, ಪೈಗಂಬರ್, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಒಗ್ಗಟ್ಟಿಗೆ ಶ್ರಮಿಸಬೇಕು ಎಂದರು.
ಈ ಏಳು ದಿನಗಳ ಶಿಬಿರದ ಉದ್ದೇಶಗಳು ಸೇವಾ ಮನೋಭಾವನೆ ಬೆಳೆಸುವುದು, ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು, ನೈರ್ಮಲ್ಯ ಮತ್ತು ರಸ್ತೆ ಸ್ವಚ್ಛತೆಯನ್ನು ಉತ್ತೇಜಿಸುವುದು, ಮಹಿಳಾ ಮತ್ತು ಮಕ್ಕಳ ಜಾಗೃತಿ, ಸ್ತ್ರೀ ಸಬಲೀಕರಣ, ಮತದಾರರ ಜಾಗೃತಿ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ನೀಡುವುದಾಗಿದೆ. ಇದರ ಮೂಲಕ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿಗಳಾಗಿ ಸಮಾಜದ ಉಜ್ವಲ ಭವಿಷ್ಯ ಕಟ್ಟುವತ್ತ ಶ್ರಮಿಸಬೇಕಾಗಿದೆ ಎಂದು ಹೇಳಿ, ಮಹಿಳಾ ವಿವಿಗೆ 500 ಗಿಡಗಳನ್ನು ಕೊಡುವ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಎನ್.ಎಸ್.ಎಸ್ ಕೋಶದ ಸಂಯೋಜನಾಧಿಕಾರಿ ಪ್ರೊ. ಅಶೋಕಕುಮಾರ ಸುರಪುರ ಮಾತನಾಡಿ, ಏಳು ದಿನಗಳ ಶಿಬಿರ ಕೇವಲ ತಾತ್ಕಾಲಿಕವಾಗಿರದೇ ಜೀವನದುದ್ದಕ್ಕೂ ಶಿಸ್ತು, ಮಾತುಗಾರಿಕೆ, ಬೆಳವಣಿಗೆ, ಸೇವಾ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಓದುವುದು ಅಷ್ಟೇ ಅಲ್ಲ ಸಾಮಾಜಿಕ ಕಾರ್ಯಗಳಲ್ಲಿ ಬೆಳೆಯಬೇಕು. ಮೊದಲು ನಿಮ್ಮ ಮನದಿಂದ ನಂತರ ಮನೆಯಿಂದ ಸೇವೆ ಪ್ರಾರಂಭವಾಗಬೇಕು. ಕೇವಲ ಸುಂದರ ಮಹತ್ವವಲ್ಲ ಆನಂದವಾಗಿರುವುದು ಮುಖ್ಯ ಎಂದರು.
ಸಮಾರಂಭದಲ್ಲಿ ಮಹಿಳಾ ವಿವಿಯ ಡಾ. ಕಲಾವತಿ ಕಾಂಬಳೆ, ಡಾ ಅಶ್ವಿನಿ ಕೆ. ಎನ್, ಡಾ. ಅಮರನಾಥ ಪ್ರಜಾಪತಿ, ವಿವಿಧ ವಿಭಾಗದ ಪ್ರಾಧ್ಯಾಪಕರು, ಮತ್ತು ಎನ್.ಎಸ್.ಎಸ್ ಸ್ನಾತಕ ‘ಬ’ ಹಾಗೂ ಮುಕ್ತ ಘಟಕಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಋತುಜಾ ಏಳು ದಿನದ ವಾರ್ಷಿಕ ವಿಶೇಷ ಶಿಬಿರದ ವರದಿ ವಾಚಿಸಿದರು. ಲಕ್ಷ್ಮೀ ಮ್ಯಾಗೇರಿ ಸ್ವಾಗತಿಸಿದರು. ಮಂಜುಳಾ ಚವ್ಹಾಣ ನಿರೂಪಿಸಿದರು. ಮಾಯಾವತಿ ವಂದಿಸಿದರು.
ಪೋಟೋ:
1. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎನ್.ಎಸ್.ಎಸ್ ಸ್ನಾತಕ ‘ಬ’ ಹಾಗೂ ಮುಕ್ತ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಂಮಾರಂಭದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸಂಘದ ಅಧ್ಯಕ್ಷ ಡಾ. ಜಾವೀದ ಜಮಾದಾರ ಮಾತನಾಡಿದರು.