ಬಿಂಕದಕಟ್ಟಿಯಲ್ಲಿ ಸಹಕಾರ ರತ್ನ ಎಂ.ವಿ. ಮೂಲಿಮನಿ ಅವರ 94ನೇ ಜಯಂತ್ಯುತ್ಸವ ಆಚರಣೆ

Sahakar Ratna M.V. in Binkadakatti. Mulimani's 94th birth anniversary celebration

ಬಿಂಕದಕಟ್ಟಿಯಲ್ಲಿ ಸಹಕಾರ ರತ್ನ ಎಂ.ವಿ. ಮೂಲಿಮನಿ ಅವರ 94ನೇ ಜಯಂತ್ಯುತ್ಸವ ಆಚರಣೆ 

ಗದಗ 13: ವಿಭಿನ್ನ ಆಲೋಚನೆ, ವಿಭಿನ್ನ ಚಿಂತನೆ ಹೊಂದಿದ್ದ ಸಹಕಾರ ರತ್ನ ಎಂ.ವಿ. ಮೂಲಿಮನಿ ಅವರು ನಾಲ್ಕೈದು ದಶಕಗಳ ಹಿಂದೆಯೇ ಗ್ರಾಮಗಳಲ್ಲಿ ಶೌಚಾಲಯಗಳ ನಿರ್ಮಾಣದ ಕನಸನ್ನು ಹೊಂದಿದ್ದರು. ಅವರ ಆಲೋಚನೆ ಮತ್ತು ದೂರದೃಷ್ಟಿ ಇಂದು ಸರಕಾರ ಉದ್ದೇಶಗಳಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಹೇಳಿದರು. 

ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿ. ವತಿಯಿಂದ ಸಹಕಾರ ರತ್ನ ಎಂ.ವಿ. ಮೂಲಿಮನಿ ಅವರ 94ನೇ ಜಯಂತ್ಯುತ್ಸವ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 67ನೇ ವಾರ್ಷಿಕ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಒಂದು ವ್ಯಕ್ತಿತ್ವವನ್ನು ಬೇರೆ ಬೇರೆ ಕಾರಣಗಳಿಗೆ ನೋಡುವುದೇ ಒಂದು ವಿಭಿನ್ನ ಅನುಭವ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ವ್ಯಕ್ತಿತ್ವ ಹೊಂದಿದ್ದ ಎಂ.ವಿ. ಮೂಲಿಮನಿ ಅವರು ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರು ಘಟಕ, ಶಿಶುವಿಹಾರ, ಅಂಗನವಾಡಿಗಳು ಇರಬೇಖು ಎಂಬುದು ಅವರ ಆಲೋಚನೆಗಳಲ್ಲಿ ಒಂದಾಗಿದ್ದವು. ಅವರ ಆಲೋಚನಾ ಪ್ರಕ್ರಿಯೆಗಳು ಪುಸ್ತಕ ರೂಪದಲ್ಲಿ ಹೊರಬಂದು ಯುವಕರಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು. 

ಭಾವನಾತ್ಮಕವಾಗಿ ಕೆಲಸ ಮಾಡುತ್ತಿದ್ದ ಮೂಲಿಮನಿ ಅವರು ಬಿಂಕದಕಟ್ಟಿ ಗ್ರಾಮವನ್ನು ರಾಜ್ಯ, ದೇಶ ಗುರುತಿಸುವ ಮಟ್ಟಕ್ಕೆ ಅಭಿವೃದ್ಧಿ ಪಡಿಸಿ, ಗ್ರಾಮಸ್ಥರ ಜೀವನಮಟ್ಟ ಸುಧಾರಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. 1960-70ರಲ್ಲಿ ಮೂಲಿಮನಿ ಅವರು ಹೇಳುತ್ತಿದ್ದ ವಿಷಯಗಳು ಇಂದು ನಾವು ಮಾತನಾಡುವ ಭಾಷಣಗಳಾಗಿವೆ. ಹಲವು ಅಭಿವೃದ್ಧಿಯ ಪ್ರಯೋಗಗಳು ಬಿಂಕದಕಟ್ಟಿಯಲ್ಲಿ ಜರುಗಿದ್ದು, ದೇಶದ ಅತ್ಯುತ್ತಮ ಗ್ರಾಮ ಪಂಚಾಯತಿಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ಮೊಟ್ಟ ಮೊದಲ ಡಿಜಿಟಲ್ ಲೈಬ್ರರಿ ಆರಂಭವಾಗಿದ್ದು ಬಿಂಕದಕಟ್ಟಿ ಗ್ರಾಮದಲ್ಲಿ ಎಂಬುದು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂದರು. 

ಬಿಂಕದಕಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪನೆ ಸೇರಿ ಸಹಕಾರ ಕ್ಷೇತ್ರದಲ್ಲಿ ಒಕ್ಕಟ್ಟು, ಸೇವಾಭಾವನೆ, ಸಹಿಷ್ಣುತೆ, ಉತ್ತಮ ವಾತಾವರಣ ಕಲ್ಪಿಸುವಲ್ಲಿ ಗ್ರಾಮಸ್ಥರ ಸಹಕಾರ ಉತ್ತಮವಾಗಿದ್ದು ಗ್ರಾಮದ ಅಭಿವೃದ್ಧಿ ಕಾರಣವಾಗಿದೆ ಎಂದು ಸಚಿವರು ಹೇಳಿದರು. 

ಕರ್ನಾಟಕ ಖನಿಜ ಅಭಿವೃಧ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್‌. ಪಾಟೀಲ ಉಗ್ರಾಣವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸರಕಾರದ ಯಾವುದೇ ಅಭಿವೃದ್ಧಿ ಪರ ಯೋಜನೆಗಳು ಜಾರಿಯಾದರೆ ಅಂತಹ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಬಿಂಕದಕಟ್ಟಿ ಗ್ರಾಮ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದರು. ಅಲ್ಲದೇ, ಗ್ರಾಮದಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಖನಿಜ ಅಭಿವೃದ್ಧಿ ನಿಗಮ ವತಿಯಿಂದ 20 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು. 

ಮಾಜಿ ಶಾಸಕ ಡಿ.ಆರ್‌. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಾಯಕತ್ವ ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ಎಂ.ವಿ. ಮೂಲಿಮನಿ ಅವರನ್ನು ಕಲಿತುಕೊಳ್ಳಬೇಕು. ಗ್ರಾಮದಲ್ಲಿ ರಚನಾತ್ಮಕ ಕಾರ್ಯಗಳನ್ನು ರವಿ ಮೂಲಿಮನಿ ಅವರು ಮುಂದುವರಿಸಿಕೊಡು ಹೋಗುತ್ತಿದ್ದಾರೆ ಎಂದು ಹೇಳಿದರು.  

ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕ ಜಿ.ಟಿ. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ ಹೈನುಗಾರಿಕೆಗೆ ಸಾಲ ವಿತರಣೆ ಮಾಡಿದರು. ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಫೋಟೊ ಅನಾವರಣಗೊಳಿಸಿದರು. ಮಾಜಿ ಸಚಿವ ಬಿ.ಆರ್‌. ಯಾವಗಲ್ಲ ಆವರು ರೈತರಿಗೆ ಮ್ಯಾಟ್ ವಿತರಣೆ ಮಾಡಿದರು. ಶಿಕ್ಷಣ ತಜ್ಞ ಜೆ.ಕೆ. ಜಮಾದಾರ ಆವರು ಸಂಸ್ಥೆ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು.  

ಸಹಕಾರ ರತ್ನ ಪುರಸ್ಕೃತರಾದ ಕೆ.ಎಲ್‌. ಪಾಟೀಲ, ಎಚ್‌.ಜಿ. ಹಿರೇಗೌಡರ, ಶಂಕ್ರಣ್ಣ ಮುನವಳ್ಳಿ, ಹಾಗೂ ರಾಜ್ಯೋತ್ಸವ ಪುರಸ್ಕೃತ ಡಾ. ಜಿ.ಬಿ. ಬೀಡನಾಳ, ಗುರಣ್ಣ ಬಳಗಾನೂರ ಅವರನ್ನು ಸನ್ಮಾನಿಸಲಾಯಿತು 

ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಮಲ್ಲಪ್ಪ ಕಲ್ಗುಡಿ, ಸಿ.ಬಿ. ದೊಡ್ಡಗೌಡ್ರು, ಜಮಾವೀತ ವುಲಾಮ ಪೀರಜಾದೆ ಅಧ್ಯಕ್ಷರು ಮೌಲಾನಾ ಇನಾಯತ್‌ವುಲ್ಲಾ, ಮಾಜಿ ಜಿಪಂ ಸದಸ್ಯ ರೇವಣಪ್ಪ ಕೊಂಡಿಕೊಪ್ಪ, ಸಹಕಾರ ಸಂಘದ ಉಪನಿಬಂಧಕಿ ಎಸ್‌.ಎಸ್‌. ಕಬಾಡೆ, ಅಸಿಸ್ಟಂಟ್ ರಜಿಸ್ಟರ್ ಪುಷ್ಪಾ ಕಡಿವಾಳರ, ಗ್ರಾಪಂ ಅಧ್ಯಕ್ಷೆ ತುಳಸಾ ಶ್ರೀನಿವಾಸ ತಿಮ್ಮನಗೌಡರ, ಉಪಾಧ್ಯಕ್ಷೆ ದ್ಯಾಮವ್ವ ಹನಮಪ್ಪ ಆರಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್‌.ವಿ. ಅಗಸನಕೊಪ್ಪ, ಉಪಾಧ್ಯಕ್ಷ ಬಸಪ್ಪ ಮಲ್ಲಪ್ಪ ಭಾವಿಕಟ್ಟಿ, ಪ್ರಾಥಮಿಕ ಸಹಕಾರ ಸಂಘ ನಿ. ಅಧ್ಯಕ್ಷ ಡಿ.ಬಿ. ತಿರ್ಲಾಪೂರ ಹಾಗೂ ಉಪಾಧ್ಯಕ್ಷ ದೇವಪ್ಪ ಯಲ್ಲಪ್ಪ ಹುಲ್ಲೋಜಿ ಪಾಲ್ಗೊಂಡಿದ್ದರು. ಆರ್‌.ಎಂ. ಮೂಲಿಮನಿ ನಿರ್ವಹಿಸಿದರು.