ಸಿದ್ದೇಶ್ವರ ಸ್ವಾಮೀಜಿಯವರ 2ನೇ ಪುಣ್ಯಸ್ಮರಣೆ: ಉಚಿತ ಆರೋಗ್ಯ ತಪಾಸಣೆ

Siddeshwar Swamiji's 2nd Memorial: Free Health Checkup

ಸಿದ್ದೇಶ್ವರ ಸ್ವಾಮೀಜಿಯವರ 2ನೇ ಪುಣ್ಯಸ್ಮರಣೆ: ಉಚಿತ ಆರೋಗ್ಯ ತಪಾಸಣೆ 

ವಿಜಯಪುರ 06: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ 2ನೇ ಪುಣ್ಯಸ್ಮರಣೆಯ ಗುರುನಮನ ಮಹೋತ್ಸವದ ಅಂಗವಾಗಿ ನಗರದ ಜ್ಞಾನಯೋಗಾಶ್ರಮದಲ್ಲಿ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರ ಮತ್ತು ರಕ್ತದಾನ ಶಿಬಿರ ಗುರುವಾರ ನಡೆಯಿತು. ಈ ಶಿಬಿರವನ್ನು ಸಸಿಗೆ ನೀರೆರೆಯುವ ಮೂಲಕ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಮ್ಮನ್ನು ಅಗಲಿ 2 ವರ್ಷಗಳಾದರೂ, ಅವರು ತೋರಿದ ಸನ್ಮಾರ್ಗ, ಜ್ಞಾನ ದಾಸೋಹಗಳು ಅಜರಾಮರವಾಗಿವೆ.  ಯಾವಾಗಲೂ ಪ್ರಕೃತಿಯ ಆರಾಧಕರಾಗಿದ್ದರು.  ನಾವು ಪ್ರಕೃತಿಯ ಜೊತೆ ಪ್ರೀತಿಯಿಂದಿದ್ದರೆ, ಸುಖಕರ ಜೀವನ ಸಾಗಿಸಬಹುದು ಎಂದು ತೋರಿಸಿ ಕೊಟ್ಟಿದ್ದರು.  ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಆರೋಗ್ಯಕರ ಜೀವನಶೈಲಿ ಪಾಲಿಸಿ, ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.  

ಪ್ರತಿ ವರ್ಷ ಗುರು ಪೂರ್ಣಿಮೆ ಮತ್ತು ಗುರುನಮನ ಮಹೋತ್ಸವದ ಅಂಗವಾಗಿ ಬಿ.ಎಲ್‌.ಡಿ.ಇ ಆಸ್ಪತ್ರೆಯು ಉಚಿತ ಆರೋಗ್ಯ ತಪಾಸಣೆ ನಡೆಸುವ ಮೂಲಕ ಜನಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. 

ಶಿಬಿರದ ಸಂಚಾಲಕ ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ಆರೋಗ್ಯ ಸಂಪತ್ತು ಎಲ್ಲ ಸಂಪತ್ತುಗಳಲ್ಲಿಯೇ ಶ್ರೇಷ್ಠ ಸಂಪತ್ತಾಗಿದೆ.  ನಿಯಮಿತ ವ್ಯಾಯಾಮ, ಸತ್ವಯುತ ಆಹಾರ ಸೇವನೆ, ಧನಾತ್ಮಕ ಚಿಂತನೆಯಿಂದ ಯಾವುದೇ ಖರ್ಚಿಲ್ಲದೆ ಸದೃಢ ಆರೋಗ್ಯ ಹೊಂದಬಹುದಾಗಿದೆ.  ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿ ನಾಲ್ಲು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಮೂರು ಜೀವಗಳನ್ನು ಉಳಿಸಬಹುದಾಗಿದೆ ಎಂದು ಹೇಳಿದರು.  

ಎರಡು ದಿನ ನಡೆದ ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆಯೊಂದಿಗೆ, ರಕ್ತ ತಪಾಸಣೆ, ಇ.ಸಿ.ಜಿ ತಪಾಸಣೆ ಮತ್ತು ಉಚಿತವಾಗಿ ಓಷಧಿ ವಿತರಿಸಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ಜನರಿಗೆ ಉಚಿತ ಚಿಕಿತ್ಸೆಗಾಗಿ ಬಿ.ಎಲ್‌.ಡಿ. ಇ ಆಸ್ಪತ್ರೆಗೆ ದಾಖಲಾಗಲು ಶಿಫಾರಸು ಮಾಡಲಾಯಿತು. 

ಈ ಶಿಬಿರದಲ್ಲಿ ಫಿಜಿಸಿಯನ್ ಡಾ. ರಜನಿ ಕುಚನೂರ, ಡಾ. ದೀಪಕ ಚಿಣಗಿ, ರಕ್ತನಿಧಿಯ ಮುಖ್ಯಸ್ಥ ಡಾ. ಪ್ರಕಾಶ ಪಾಟೀಲ, ಡಾ. ಸತೀಶ ಅರಕೇರಿ, ಡಾ. ಪ್ರಶಾಂತ ವಾಜಂತ್ರಿ, ಶುಶ್ರೂಷಕರಾದ ಕಲ್ಲಪ್ಪ ಸಾರವಾಡ, ರಾಯಪ್ಪ ಜಾಡರ, ಶ್ರೀಶೈಲ ಕುಂಬಾರ, ಸಾರ್ವಜನಿಕ ಸಂಪರ್ಕ ಸಹಾಯಕ ಅನಿಲ ಶಿರಹಟ್ಟಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ಥಾನಿಕ ವೈದ್ಯರು ಭಾಗವಹಿಸಿದ್ದರು. 

ಆಶ್ರಮ ಭಕ್ತಮಂಡಳಿಯ ಪ್ರಕಾಶ ಕನ್ನೂರ, ಕಾಶೀನಾಥ ಅಣೆಪ್ಪನವರ, ಅಶೋಕ ತಿಮಶೆಟ್ಟಿ, ಉಮೇಶ ಶಿವಯೋಗಿಮಠ, ಎಂ. ಐ. ಕುಮಟಗಿ, ಆಶ್ರಮ ಟ್ರಸ್ಟ್‌ ಕಾರ್ಯದರ್ಶಿ ಎಂ. ಜಿ. ಹಳ್ಳದ ಉಪಸ್ಥಿತದ್ದರು. 

ಎರಡು ದಿನಗಳ ಶಿಬಿರದಲ್ಲಿ ಸುಮಾರು 800 ಜನರ ಆರೋಗ್ಯ, 400 ರಕ್ತ, 50 ಇ.ಸಿ.ಜಿ ತಪಾಸಣೆ ಮಾಡಲಾಯಿತು ಮತ್ತು 40 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.  

ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ಸುಮಾರು 65 ಜನರಿಗೆ ಬಿ.ಎಲ್‌.ಡಿ.ಇ ಆಸ್ಪತ್ರೆಗೆ ದಾಖಲಾಗಲು ಶಿಫಾರಸು ಮಾಡಲಾಯಿತು.