ವಿಜಯಪುರ: ಕಾಲುವೆಗಳಿಗೆ ನೀರು ಹರಿಸಲು ರೈತರ ಮನವಿ

ಲೋಕದರ್ಶನ ವರದಿ

ವಿಜಯಪುರ 09: ಮುಳವಾಡ ಏತನೀರಾವರಿ ಯೋಜನೆ ಹಣಮಾಪುರ ಜಾಕವೆಲ್ನಿಂದ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಅರ್ಪಿಸಿದರು 

ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಈ ಹಿಂದೆ ನೀರು ಹರಿಸಲಾಗಿದ್ದರೂ, 80ಕಿ.ಮೀ ಉದ್ದದ ಪಶ್ಚಿಮ ಕಾಲುವೆಯಲ್ಲಿ ಕೇವಲ 40ಕಿ.ಮೀವರೆಗೆ ಮಾತ್ರ ನೀರು ಹರಿದಿದೆ. ಮುಂದಿನ 40ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 20ಗ್ರಾಮಗಳು ಇದ್ದು, ಇಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ. ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆಯಿರುವ ಈ ಸಂದರ್ಭದಲ್ಲಿ ಪಶ್ಚಿಮ ಕಾಲುವೆಯ ಕೊನೆಯ ಹಳ್ಳಿಯವರೆಗೂ ನೀರು ಹರಿಸಿ, ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಎಂದು ರೈತ ಮುಖಂಡ ಡಾ.ಕೆ.ಎಚ್.ಮುಂಬಾರೆಡ್ಡಿ ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರು.

ಕಂಬಾಗಿ, ಬೋಳಚಿಕ್ಕಲಕಿ, ನಂದ್ಯಾಳ, ಕಾತ್ರಾಳ, ಗುಣದಾಳ, ಸಂಗಾಪುರ, ಹಣಮಸಾಗರ ಗ್ರಾಮಗಳ ಪರವಾಗಿ ಉಮೇಶ ಮಲ್ಲಣ್ಣವರ, ರಮೇಶ ಬಡ್ರಿ, ಮಲ್ಲು ದಳವಾಯಿ, ಮಹಾದೇವಪ್ಪ ಮದರಖಂಡಿ, ಗಿರಿಮಲ್ಲಪ್ಪ ಮಠಪತಿ, ರಾಮನಿಂಗ ಕೊಕಟನೂರ ಸೇರಿದಂತೆ ಹಲವು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಅಪರ್ಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕನಗವಲ್ಲಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ತಮ್ಮ ಮನವಿಯನ್ನು ರವಾನಿಸಿ, ಅಗತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.