ಬಳ್ಳಾರಿ: ಭಾರಿ ಮಳೆ: ರಾತ್ರಿಯಿಡಿ ಜನರ ಜಾಗರಣೆ

ಲೋಕದರ್ಶನ ವರದಿ

ಬಳ್ಳಾರಿ 23: ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದರಿಂದ ಹಳ್ಳದ ನೀರು ಗಾಳೆಮ್ಮನಗುಡಿ ಗ್ರಾಮದ ಮನೆಗಳಿಗೆ ನುಗ್ಗಿದ್ದರಿಂದ ಸ್ಥಳೀಯರು ತೊಂದರೆ ಅನುಭವಿಸಿದರು. 

ಗಾಳೆಮ್ಮನಗುಡಿ ಗ್ರಾಮ ತುಂಗಭದ್ರಾ ಹಿನ್ನೀರು ಪ್ರದೇಶದ ಅಂಚಿನಲ್ಲಿದೆ. ಗುಡ್ಡಾಗಾಡು ಪ್ರದೇಶದಿಂದ ಹರಿದು ಬರುವ ಮಳೆ ನೀರು ಗ್ರಾಮದ ಹೃದಯ ಭಾಗದಿಂದ ಹರಿದು ಜಲಾಶಯ ಸೇರುತ್ತದೆ. ಆದರೆ, ಭಾರಿ ಮಳೆಯಿಂದ ಹಳ್ಳದ ನೀರು ಮನೆಗಳಿಗೆ ನುಗ್ಗಿದ್ದರಿಂದ ರಾತ್ರಿಯಿಡಿ ಜನರು ಜಾಗರಣೆ ಮಾಡುವಂತಾಯಿತು. 

ಮೂರು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳದಿರುವುದು ಸಮಸ್ಯೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗಾಳೆಮನಗುಡಿ ಗ್ರಾಮದ ಮೂಲಕ ನಾಲ್ಕೈದು ಹಳ್ಳಗಳು ಹರಿದು ತುಂಗಭದ್ರಾ ಜಲಾಶಯದ ಹಿನ್ನೀರು ಸೇರುತ್ತದೆ. ಮೊದಲು ಹಳ್ಳದ ನೀರು ಬ್ರಿಡ್ಜ್ ಮೂಲಕ ಗ್ರಾಮದ ಹೃದಯ ಭಾಗದಿಂದ ಹರಿಯುತ್ತಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶುರುವಾದಗಿನಿಂದ ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂಬುದು ಇಲ್ಲಿನ ಜನರ ಆರೋಪ. 

ಗ್ರಾಮದ ರಂಗಪ್ಪ, ಕುಮಾರ್, ಬೋಡ್ ರಾಜ, ಪರಸಪ್ಪ, ಗಣಪತಿ, ನಿಂಗಪ್ಪ, ನಾಗಮ್ಮ ಸೇರಿ ಹತ್ತಾರು ಮನೆಗಳಿಗೆ ಹಳ್ಳದ ನೀರು ನುಗ್ಗಿ ದವಸ ಧಾನ್ಯ ಸೇರಿ ಆಹಾರ ಪದಾರ್ಥಗಳು ನೀರು ಪಾಲಾಗಿವೆ. ನುಗ್ಗಿದ ನೀರಿನಿಂದ ರಾತ್ರಿಯಿಡಿ ನಿದ್ದೆ ಇಲ್ಲದೆ ವೃದ್ಧರು, ಮಕ್ಕಳು ಪರದಾಡಿದರು. ಅಲ್ಲದೆ, ತುಂಗಭದ್ರಾ ಜಲಾಶಯ ತುಂಬಿರುವುದರಿಂದ ಹುಳು-ಉಪ್ಪಡಿಗಳ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ