ಬಳ್ಳಾರಿ: ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ

ಲೋಕದರ್ಶನ ವರದಿ

ಬಳ್ಳಾರಿ 05: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಗುರುವಾರ ಬೆಳಗ್ಗೆ 7ರಿಂದ ಆರಂಭವಾಗಿದ್ದು,  ಸಂಜೆ 5ರವರೆಗೆ ಶೇ.58.93ರಷ್ಟು ಮತದಾನವಾಗಿದೆ. ಕ್ಷೇತ್ರದಾದ್ಯಂತ ಶಾಂತಿಯುತ ಮತದಾನವಾಗಿದೆ.

     ಕ್ಷೇತ್ರದ 247 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯು ಆರಂಭದಲ್ಲಿ ಮಂದಗತಿಯಲ್ಲಿ ಸಾಗಿ, ನಂತರ ಬಿರುಸು ಪಡೆಯಿತು. ಬೆಳಗ್ಗೆ 9ರವರೆಗೆ ಶೇ.6.5ರಷ್ಟಾಗಿದ್ದ ಮತದಾನದ ಪ್ರಮಾಣ 11ರವರೆಗೆ ಶೇ.20.03ರಷ್ಟಾಗುವುದರ ಮೂಲಕ ಚುರುಕು ಪಡೆಯಿತು. ಮಧ್ಯಾಹ್ನ 1ರವರೆಗೆ ಶೇ.34.95 ಮತ್ತು ಮಧ್ಯಾಹ್ನ 3ರವರೆಗೆ ಶೇ.47.38ರಷ್ಟು ಮತದಾನವಾಗಿದೆ.

       88 ಮುದ್ದಾಪುರದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಸ್ಥಳೀಯರು ಕೆಲಕಾಲ ಮತಗಟ್ಟೆ ಬಳಿ ಪ್ರತಿಭಟನೆ ನಡೆಸಿದ್ದರು; ತಹಸೀಲ್ದಾರರು ಮತ್ತು ಸಹಾಯಕ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಅಶ್ವಾಸನೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದು ಮತಚಲಾಯಿಸಿದರು. ಇದನ್ನು ಹೊರತುಪಡಿಸಿದರೇ ಉಳಿದೆಡೆ ಯಾವುದೇ ರೀತಿಯ ಅಹಿತಕರ ಘಟನೆಗಳು,ವಾಗ್ವಾದಗಳು ನಡೆದಿರಲಿಲ್ಲ ಅತ್ಯಂತ ಬಿಗಿ ಪೊಲೀಸ್ ಭದ್ರತೆಯಲ್ಲಿ ಮತದಾನ ನಡೆಯಿತು. 

    ಯುವಕರು,ವಯಸ್ಕರು, ವೃದ್ಧರು ಸೇರಿದಂತೆ ಎಲ್ಲರು ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸುತ್ತಿರುವುದು ಕಂಡುಬಂದಿತು.

     ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ,ಜಿಪಂ ಸಿಇಒ ಕೆ.ನಿತೀಶ್ ಮತ್ತು ಸಹಾಯಕ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳಾದ ಶೇಖ್ ತನ್ವೀರ್ ಅಸೀಫ್ ಅವರು ಕ್ಷೇತ್ರದ ವಿವಿಧೆಡೆ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಸೇರಿದಂತೆ 13 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಡಿ.9ರಂದು ಬಳ್ಳಾರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುವ ಮತ ಎಣಿಕೆಯಲ್ಲಿ ಗೊತ್ತಾಗಲಿದೆ.

ಸಿಹಿ ಹಂಚಿ ನಿಯಮ ಉಲ್ಲಂಘಿಸಿದ ಕವಿರಾಜ್

ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕವಿರಾಜ್ ಅರಸು ಅವರು ಹೊಸಪೇಟೆ ತಾಲೂಕಿನ ಕಲ್ಲಳ್ಳಿಯಲ್ಲಿ ತಾವು ಮತಚಲಾಯಿಸಿದ ನಂತರ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಸಿಹಿ ಹಂಚಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ನಿರ್ಧರಿಸಿರುವ ಚುನಾವಣಾಧಿಕಾರಿಗಳು ಅರಸು ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಲೆಕ್ಕಪತ್ರ ಒಪ್ಪಿಸದ ಹಿನ್ನೆಲೆ: ಪ್ರಕರಣ ದಾಖಲು

ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಅವಧಿಯೊಳಗೆ ಕಡ್ಡಾಯವಾಗಿ ಕನಿಷ್ಠ 3 ಬಾರಿ ಚುನಾವಣಾ ವೆಚ್ಚ ವೀಕ್ಷಕರಿಂದ ಲೆಕ್ಕ ಪತ್ರಗಳನ್ನು ಪರಿಶೀಲನೆಗೊಳಿಸಬೇಕಾಗುತ್ತದೆ. ಆದರೇ ಪಕ್ಷೇತರ ಅಭ್ಯರ್ಥಿ  ಸಿ.ಎಂ.ಮಂಜುನಾಥ ಎನ್ನುವವರು ಲೆಕ್ಕಪತ್ರ ಪರಿಶೀಲನೆಯನ್ನು ಇದುವರೆಗೆ ಒಪ್ಪಿಸಿದ ಕಾರಣ ಅವರ ಮೇಲೆ ಸಹಾಯಕ ಚುನಾವಣಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.

ಜನತಾ ಪ್ರಾತಿನಿಧ್ಯ ಅಧಿನಿಯಮ 1951 ಪ್ರಕರಣ 171ಐ ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.