ಸಮುದಾಯದ ಆರೋಗ್ಯವೇ ಭಾರತದ ಪ್ರಗತಿಯ ಸಂಕೇತ: ಡಾ. ಮಾಸ್ತಿಹೊಳಿ

Community health is the symbol of India's progress: Dr. Mastiholi

ವಿಜಯಪುರ 22: ಸಮುದಾಯದ ಆರೋಗ್ಯ ಪ್ರಗತಿಯಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.  

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌.ಎಸ್‌. ಎಸ್ ಕೋಶ, ಸ್ವಾಮಿ ವಿವೇಕಾನಂದ ಅಧ್ಯನಯ ಕೇಂದ್ರ ಹಾಗೂ ಯುವ ರೆಡ್ ಕ್ರಾಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ವಿಜಯಪುರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಕರ್ನಾಟಕ ರಾಜ್ಯ ಏಡ್ಸ ಪ್ರಿವೆನಷನ್ ಸೊಸೈಟಿ, ಬೆಂಗಳೂರು, ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ‘ರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸ್ವಾಮಿ ವಿವೇಕಾನಂದರು ಆರೋಗ್ಯ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮೂಲಕ ಸಮಗ್ರ ಸಮಾಜದ ಅಭಿವೃದ್ಧಿಯನ್ನು ಒತ್ತಿಹೇಳಿದರು. ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ಸಮಾನವಾಗಿ ಲಭ್ಯವಾಗಬೇಕು ಮತ್ತು ಸಮುದಾಯದ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಲು ಸೂಕ್ತ ಸೌಲಭ್ಯಗಳನ್ನು ಪಡೆಯಬೇಕು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ನೀಡುವ ಸಂಸ್ಥೆಗಳು ಸಮಾಜದ ಸುಸ್ಥಿರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸುತ್ತವೆ ಎಂದರು. 

ಇದೇ ಸಂದರ್ಭದಲ್ಲಿ ಜಿಲ್ಲಾ ಏಡ್ಸ್‌, ಕ್ಷಮರೋಗ ನಿಯಂತ್ರಣ ಹಾಗೂ ರಕ್ತ ಸುರಕ್ಷತಾ ಅಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಮಾತನಾಡಿ, ಸಮುದಾಯದಲ್ಲಿ ಏಡ್ಸ್‌ ಕುರಿತ ಅರಿವು ಅಗತ್ಯವಾಗಿದೆ. ಯುವ ಸಮುದಾಯ ದೇಶದ ಹಿತ ಕಾಪಾಡುವಲ್ಲಿ ಶ್ರಮಿಸಬೇಕಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಡಾ. ಹಣಮಂತಯ್ಯ ಪೂಜಾರಿ ಮಾತನಾಡಿ, ಸ್ವಾಮಿ ವಿವೇಕಾನಂದ ಅವರು ಯುವಜನತೆಗೆ ಆರೋಗ್ಯ ಮತ್ತು ಸಮಾಜ ಸೇವೆಯ ಮಹತ್ವವನ್ನು ಉಪದೇಶಿಸಿದ್ದರು. ಅವರ ತತ್ವಾನುಸಾರ, ಯುವಕರು ಕೇವಲ ತಮ್ಮ ಸ್ವಾಸ್ಥ್ಯವಷ್ಟೇ ಅಲ್ಲ, ಸಮುದಾಯದ ಆರೋಗ್ಯಕ್ಕೂ ಜಾಗೃತಿಯುಂಟು ಮಾಡಬೇಕು. ಪೌಷ್ಠಿಕ ಆಹಾರ, ಶಾರೀರಿಕ ವ್ಯಾಯಾಮ, ಮತ್ತು ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದರು.  

ಕಾರ್ಯಕ್ರಮದಲ್ಲಿ ಎನ್‌.ಎಸ್‌.ಎಸ್ ಕೋಶದ ಸಂಯೋಜಕ ಡಾ. ಅಶೋಕಕುಮರ ಸುರಪುರ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಯುವ ದಿನದ ಅಂಗವಾಗಿ ಏರಿ​‍್ಡಸಿದ ಭಿತ್ತಿಚಿತ್ರ ಸ್ಪರ್ದೆಯಲ್ಲಿ ಶಿಕ್ಷಣ ಅಧ್ಯಯನ ವಿಭಾಗದ ಬಿ.ಎಡ್ ವಿದ್ಯಾರ್ಥಿನಿ ತೇಜಸ್ವೀನಿ ಪ್ರಥಮ ಸ್ಥಾನ, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಭೂಮಿಕಾ ಕೊಣ್ಣುರ ದ್ವೀತಿಯ ಸ್ಥಾನ ಮತ್ತು ಸವಿತಾ ಚಿಗರಿ ತೃತೀಯ ಸ್ಥಾನ ಪಡೆದರು. ಡಾ. ವಿಷ್ಣು ಶಿಂದೆ ವಿವಿಧ ಸ್ಪರ್ದೆಗಳ ಬಗ್ಗೆ ವಿವರಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.  

ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ ಘಟಕದ ಸಂಯೋಜಕಿ ಡಾ. ಕಲಾವತಿ ಕಾಂಬಳೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಮೇಲ್ವಿಚಾರಕ ಬಾಬುರಾವ ತಳವಾರ, ಆಲ್‌ಅಮೀನ ವೈದ್ಯಕೀಯ ಕಾಲೇಜಿನ ಆಪ್ತ ಸಮಾಲೋಚಕಿ ಅನ್ನಪೂರ್ಣ, ಮಹಾದೇವಿ, ಶಿಲ್ಪಾ, ವಿಜಯಕುಮಾರ ಮತ್ತು ಶಿಕ್ಷಣ ಅಧ್ಯಯನ್ ವಿಬಾಗ ಹಾಗೂ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಬಿ.ಎಡ್ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಯಾಸ್ಮೀನ್ ಸುತಾರ ನಿರೂಪಿಸಿದರು, ಪೂಜಾ ಬಿರಾದಾರ ವಂದಿಸಿದರು.