ಕಾಗವಾಡ, 24 : ಖಿದ್ಮತ್ ಫೌಂಡೇಶನ್‌ನವರು ಗ್ರಾಮದ 8, 9 ಮತ್ತು 10 ನೇ ತರಗತಿಯ ಕನ್ನಡ ಮತ್ತು ಉರ್ದು ವಿದ್ಯಾರ್ಥಿಗಳಿಗೆ ಬೇಸಿಗೆಯ ರಜೆಯಲ್ಲಿ ಉಚಿತ ಶೈಕ್ಷಣಿಕ ಶಿಬಿರ ಹಮ್ಮಿಕೊಂಡಿದ್ದು, ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕರು ಹಾಗೂ ಜುಗೂಳ ಪಿಕೆಪಿಎಸ್‌ನ ಅಧ್ಯಕ್ಷರು, ಮುಖಂಡ ಅಣ್ಣಾಸಾಬ ಪಾಟೀಲ ತಿಳಿಸಿದ್ದಾರೆ.
ಅವರು ಶುಕ್ರವಾರ ದಿ. 23 ರಂದು ತಾಲೂಕಿನ ಜುಗೂಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಸಭಾಭವನದಲ್ಲಿ ಖಿದ್ಮತ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿ, ಮಾತನಾಡುತ್ತಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಗ್ರಾ.ಪಂ. ಸದಸ್ಯ ಅರುಣ ಗಣೇಶವಾಡಿ, ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ದುಬಾರಿಯಾಗಿದೆ. ಅಂತಹದ್ದರಲ್ಲಿ ಖಿದ್ಮತ್ ಫೌಂಡೇಶನ್ ಅವರು ಮಕ್ಕಳಿಗೆ ಉಚಿತ ಶಿಬಿರ ಹಮ್ಮಿಕೊಂಡು, ಮಕ್ಕಳ ಶಿಕ್ಷಣ ಗುಣಮಟ್ಟ ವೃದ್ಧಿಸಲು ಶ್ರಮಿಸುತ್ತಿರುವುದು ಅಭಿನಂದನೀಯವಾಗಿದೆ. ಅವರು ಸಮಾಜ ಮುಖಿ ಕಾರ್ಯಕ್ರಮಗಳಿಗೆ ಗ್ರಾಮದ ಮುಖಂಡರು ಸದಾ ಸಾಥ ನೀಡಲಿದ್ದೇವೆ ಎಂದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷ ಕಾಕಾಸಾಬ ಪಾಟೀಲ, ಮುಖಂಡರಾದ ಅನೀಲ ಕಡೋಲೆ ಉಮೇಶ ಪಾಟೀಲ, ದಯಾನಂದ ಮಿಣಚೆ, ಸುರೇಶ ಪಾಟೀಲ, ಯಾಶಿನ ಜಮಾದರ, ಅನ್ವರ ಶಿರಗುಪ್ಪೆ, ಖಿದ್ಮತ್ ಫೌಂಡೇಶನ್‌ನ ಅಧ್ಯಕ್ಷ ಮೌಲಾ ಮುಜಾವರ, ಉಪಾಧ್ಯಕ್ಷ ರಮಜಾನ ಮೋದಿನ ಸೇರಿದಂತೆ ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.