ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮತಹ್ಯೆ ಪ್ರಕರಣ: ಸಚಿವ ಪ್ರಿಯಾಂಕ್‌ಖರ್ಗೆ ದುರಹಂಕಾರದ ವರ್ತನೆ ತೋರುತ್ತಿದ್ದಾರೆ: ಶಾಸಕ ಜನಾರ್ದನ ರೆಡ್ಡಿ

Contractor Sachin Panchal's suicide case: Priyank Kharge is showing arrogance: MLA Janardhana Reddy

ಬಳ್ಳಾರಿ 31: ‘ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮತಹ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹುಗುರುವಾಗಿ ಮಾತನಾಡುತ್ತಾ, ದುರಹಂಕಾರದ ವರ್ತನೆ ತೋರುತ್ತಿದ್ದಾರೆ. ಅವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಧೈರ್ಯ ಇಲ್ಲದಂತಾಗಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯಲ್ಲಿ ಈ ಕುರಿತು ಮಾತನಾಡಿದ ಅವರು ಬೀದರ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ತುಂಬಾ ಗಂಭೀರವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕಿತ್ತು, ಇಲ್ಲದಿದ್ದರೆ ಸಿಎಂ ಆದ್ರೂ ರಾಜೀನಾಮೆ ಪಡೆದುಕೊಳ್ಳಬೇಕಿತ್ತು ಆದರೆ ಮುಖ್ಯಮಂತ್ರಿ ಆ ಧೈರ್ಯ ಮಾಡಲಿಲ್ಲ ಎಂದು ಹೇಳಿದರು.

ತಂದೆ ಎಐಸಿಸಿ ಅಧ್ಯಕ್ಷರಿದ್ದಾರೆ ಅನ್ನೋ ಸೊಕ್ಕು, ದುರಹಂಕಾರ ಪ್ರಿಯಾಂಕ್ ಖರ್ಗೆಗೆ ಇದೆ. ಮಲ್ಲಿಕಾರ್ಜುನ ಖರ್ಗೆಯವರು ಮನಸ್ಸು ಮಾಡಿದ್ದರೆ ಸಿಎಂ ಸ್ಥಾನವನ್ನು ಕಿತ್ತುಕೊಳ್ಳಬಹುದು ಎನ್ನುವ ದೈರ್ಯ ಪ್ರಿಯಾಂಕ್ ಖರ್ಗೆಗೆ ಇದೆ. ಹೀಗಾಗಿ ಬಿಜೆಪಿಯವರು ಬಟ್ಟೆ ಹರಿದುಕೊಂಡ್ರೂ ನಾನು ರಾಜೀನಾಮೆ ನೀಡಲ್ಲ ಎಂದು ಸೊಕ್ಕಿನ ಮಾತುಗಳನ್ನು ಆಡಿದ್ದಾರೆ ಎಂದು ಹೇಳಿದರು.

ಚಂದ್ರಶೇಖರ ಆತ್ಮಹತ್ಯೆಯಿಂದ ವಾಲ್ಮೀಕಿ ಹಗರಣ ಹೊರಗಡೆ ಬಂತು. ಇದೀಗ ಓರ್ವ ಗುತ್ತಿಗೆದಾರ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದಿಲ್ಲ. ಲಕ್ಚ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಬರೆದು ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿ ಸಾಕಷ್ಟು ಜನರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಲಿಂಗ ಸ್ವಾಮೀಜಿ, ಮಣಿಕಂಠ ರಾಠೋಡ್, ಚಂದು ಪಾಟೀಲ್, ಬಸವರಾಜ ಮತ್ತು ಮೂಡ್ ಕೊಲೆ ಮಾಡೋದಕ್ಕೆ ಸುಪಾರಿ ಕೊಟ್ಟಿದ್ದಾರೆ. ಇದೆಲ್ಲ ಸಚಿನ್ ಬರೆದಿರುವ ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿದೆ.

ಇಡೀ ಸಚಿನ್ ಕುಟುಂಬದ ಜೊತೆ ಬಿಜೆಪಿ ಇದೆ.. ಸಚಿನ್ ಡೆತ್ ನೋಟ್ ಬರೆದಿದ್ದಾರೆ. ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಅವರ ಹೆಸರನ್ನ ಬರೆದಿದ್ದಾರೆ. ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಸಚಿನ್ ಡೆತ್ ನೋಟ್ ಬರೆದು ಸಾವನ್ನಪ್ಪಿದ್ದಾನೆ. ಡೆತ್ ನೋಟ್ ಬಗ್ಗೆ ಪ್ರಿಯಾಂಕ್ ಖರ್ಗೆ, ಗೃಹ ಸಚಿವರು, ಡಿಸಿಎಂ ಬಹಳ ಹಗುರವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಯಾವ ರೀತಿ ಪಾಠ ಕಲಿಸ್ತಾರೆ ಅನ್ನೋದು ಗೊತ್ತಾಗಲಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಪೋಸ್ಟ್ ಹಾಕಿದ್ದ. ಈ ವಿಚಾರದಲ್ಲಿ ಸಹೋದರಿಯರು ಠಾಣೆಗೆ ಹೋಗಿ ದೂರು ಕೊಟ್ರೂ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ಪ್ರಯತ್ನಿಸಿದ್ರೆ ಸಚಿನ್ ಬಹುಶ ಬದುಕುಳಿಯುತ್ತಿದ್ದ ಅವರ ಸಹೋದರಿಯರ ಬಗ್ಗೆಯೇ ಪೊಲೀಸರು ಕೆಟ್ಟದಾಗಿ ಮಾತನಾಡಿ ಕಳಿಸಿದ್ದಾರೆ. ಬೀದರ್, ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳೆಲ್ಲಾ ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಜನ ಮಾತನಾಡ್ತಿದ್ದಾರೆ ಎಂದು ರೆಡ್ಡಿ ಕಿಡಿಕಾರಿದರು.

ಸಿ.ಟಿ. ರವಿ ವಿಚಾರದಲ್ಲಿ ಪೊಲೀಸರು ಉಗ್ರಗಾಮಿಗಳ ರೀತಿ ನಡೆಸಿಕೊಂಡಿದ್ರು. ಮುನಿರತ್ನ ವಿಚಾರದಲ್ಲೂ ಹಾಗೇ ಆಗಿದೆ. ಶಾಸಕರು, ಗುತ್ತಿಗೆದಾರರು, ಅಧಿಕಾರಿಗಳಿಗೆ ಇಷ್ಟೆಲ್ಲಾ ಆಗುತ್ತಿದೆ.