ಜನಿವಾರ ತೆಗೆಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈ ಆಗ್ರಹ

Demand for stern action against those responsible for the Janivaar incident

ಕಂಪಿ 28:  ವಿದ್ಯಾರ್ಥಿಗಳ ಜನಿವಾರ ತೆಗೆಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಜತೆಗೆ ಕಾಶ್ಮೀರದಲ್ಲಿ ನಡೆದ ಅಮಾಯಕರ ಮೇಲಿನ ದಾಳಿ ಖಂಡಿಸಿ, ಕಂಪ್ಲಿ ತಾಲೂಕು ಜನಿವಾರ ಸಮುದಾಯಗಳ ಸಮಿತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡ ಶ್ರೀಧರ್ ಶ್ರೇಷ್ಠಿ ಮಾತನಾಡಿ, ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿ ಹಿಂದೂ ಸಂಪ್ರದಾಯದ ಆಚಾರ ವಿಚಾರವನ್ನು ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮಾರ್ಗದರ್ಶನ ರುವ ಸಭ್ಯ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವವರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ. ಮುಖಂಡ ಪಿ.ಬ್ರಹ್ಮಯ್ಯ ಮಾತನಾಡಿ, ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗೆ ಅವಕಾಶ ಕೊಡದೇ, ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ​‍್ ಮೆರೆದ ವರ್ತನೆ ಅತ್ಯಂತ ಹೇಯ. ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಎಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವರ್ತನೆ ಅತ್ಯಂತ ಖಂಡನೀಯವಾಗಿದೆ. ಕಾಶ್ಮೀರದಲ್ಲಿ ಅಮಾಯಕರ ಮೇಲಿನ ದಾಳಿಯು ಖಂಡನೀಯವಾಗಿದೆ ಎಂದರು.

ಇಲ್ಲಿನ ಉದ್ಭವ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಗ್ರೇಡ್‌-2 ತಹಶೀಲ್ದಾರ್ ಷಣ್ಮುಖಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರಾದ ಡಿ.ವಿ.ಸುಬ್ಬಾರಾವ್, ಜಗದೀಶ ರಾಯ್ಕರ್, ಡಿ.ಮೌನೇಶ, ಚಿತ್ರಗಾರ, ಡಿ.ಗೋಪಾಲಕೃಷ್ಣ, ವಿಶ್ವನಾಥ, ಎಂ.ನಾಗರಾಜ, ಅಂಜಿನಪ್ಪ, ಕುಮಾರ, ನಾರಾಯಣಪ್ಪ, ಕೆ.ಶ್ರೀನಾಥ್, ಶಿವಕುಮಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.