ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ

ಲೋಕದರ್ಶನವರದಿ

ಶಿಗ್ಗಾವಿ : ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿ ಮನೆಗಳನ್ನು ಕಳೆದುಕೊಂಡ ಫಲಾನುಭವಿಗಳ ಆಯ್ಕೆಯು ಸರಿಯಾಗಿಲ್ಲ ಕೂಡಲೇ ಅದರ ತನಿಖೆಯಾಗಬೇಕು ಮತ್ತು ಆಯ್ಕೆಯ ಮರು ಪರಿಶೀಲನೆಯಾಗಬೇಕು, ಇಲ್ಲಿ ಹಣ ಪಡೆದು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರಿಂದ ಗ್ರಾಮಗಳಿಗೆ ಜನಪ್ರತಿನಿಧಿಗಳು ಹೋಗದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ತಾಪಂ ಸದಸ್ಯ ಶ್ರೀಕಾಂತ ಪೂಜಾರ ಗಂಭೀರವಾಗಿ ಆರೋಪಿಸಿದರು.  

ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ ಅವರು ತಹಶೀಲ್ದಾರರು ಇಲ್ಲಿಯವರೆಗೆ ನಮಗೆ ಕಂಡಿಲ್ಲ, ಬನ್ನೂರ ಗ್ರಾಮದಲ್ಲಿ 205 ಮನೆಗಳಿಗೆ ಶೇ. 70ರಷ್ಟು ಬಿದ್ದಿವೆ ಎಂದು ವರದಿಯಾದರೂ ಅವರಿಗೆ ಇಲ್ಲಿಯವರೆಗೂ ಪರಿಹಾರ ವಿತರಣೆಯಾಗಿಲ್ಲ ಇಲ್ಲಿ ಗ್ರಾಮ ಪಂಚಾಯತಿಯ ವಾಲೀಕಾರರಿಗೆ ಜವಾಬ್ದಾರಿಯನ್ನು ಕೊಟ್ಟು ಅವರಿಂದ ಪರಿಹಾರ ಒದಗಿಸುವ ಕಾರ್ಯ ನಡೆದಿದೆ ಅಲ್ಲದೇ ಇಲ್ಲಿ ಹಣವನ್ನು ಪಡೆದು ಮನೆಗಳಿಗೆ ಗ್ರೇಡ್ಗಳನ್ನು ನೀಡಿ ಪರಿಹಾರ ನೀಡಲಾಗುತ್ತಿದೆ, ಒಂದೇ ಮನೆಗೆ ನಾಲ್ಕು ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗಿದೆ ಅಲ್ಲದೇ ಇದರಲ್ಲಿ ತಾರತಮ್ಯ ನೀತಿ ಅಳವಡಿಸಲಾಗಿದೆ ಎಂದು ಆರೋಪಿಸಿದರು.

ಶಿಶು ಅಭಿವೃದ್ಧಿ ಇಲಾಖೆ: ಭಾಗ್ಯ ಲಕ್ಷ್ಮಿ ಬಾಂಡ್ಗಳ ವಿತರಣೆಯಲ್ಲಿ 500 ರೂ ರಿಂದ ಸಾವಿರ ರೂಗಳನ್ನು ಪಡೆಯಲಾಗಿದೆ, ಸಭೆಗೆ ತಪ್ಪು ಮಾಹಿತಿ ನೀಡುತ್ತಿರುವ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ಸದಸ್ಯ ವಿಶ್ವನಾಥ ಹರವಿ ಒತ್ತಾಯಿಸಿದರು, ಮಹಿಳಾ ಸಂಘಗಳ ಬದಲಾವಣೆಯಲ್ಲಿ ತಾಪಂ ಸೂಚನೆಗಳನ್ನು ಅನುಸರಿಸಿಲ್ಲ, ಎಂಎಸ್ಪಿಸಿ ಮಹಿಳಾ ಸಿಬ್ಬಂದಿಗಳು ಹಾಕಿರುವ ರಿಟ್ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ತಿಳಿದಿಲ್ಲ ಎಂದು ಶ್ರೀಕಾಂತ ಪೂಜಾರ ಸಭೆಗೆ ತಿಳಿಸಿದರು.

ಆರೋಗ್ಯ ಇಲಾಖೆ: ತಾಲೂಕಿನ ತಡಸ ಆರೋಗ್ಯ ಕೇಂದ್ರದಲ್ಲಿ ಸಲಾಯಿನ್ ಬಾಟಲ್ ಮತ್ತು ಔಷಧಿಗಳು ಇಲ್ಲವೆಂದು ಹೊರಗಡೆ ಕಳಿಸಿ ತರಿಸುತ್ತಿದ್ದು ಬಡವರಿಗೆ ಇದರಿಂದ ತೊಂದರೆಯಾಗಿದೆ ಸದಸ್ಯ ರಾಜಕುಮಾರ ವೇಣರ್ೆಕರ ಸಭೆಯಲ್ಲಿ ತಿಳಿಸಿದರೆ, ಬಂಕಾಪೂರ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಹಗಲಿನಲ್ಲಿ ಚಿಕ್ಕ ಚಿಕಿತ್ಸೆ ಇದ್ದರೂ ಶಿಗ್ಗಾವಿ ಆಸ್ಪತ್ರೆಗೆ ಕಳಿಸುತ್ತಿದ್ದಾರೆ ಇದರ ಬಗ್ಗೆ ಏನು ಕ್ರಮ ತೆಗೆದುಳ್ಳುತ್ತೀರಿ ? ಎಂದು ಸದಸ್ಯರಾದ ಯಲ್ಲಪ್ಪ ನರಗುಂದ ಮತ್ತು ವಿಶ್ವನಾಥ ಹರವಿ ಪ್ರಶ್ನಿಸಿದರು.

ಕೃಷಿ ಇಲಾಖೆ: ಮೊನ್ನೆ ನಡೆದ ರೈತ ದಿನಾಚರಣೆಗೆ ತಾಪಂ ಸದಸ್ಯರಿಗೆ ಅಹ್ವಾನ ನೀಡಿಲ್ಲ, ರೈತ ಸಾಧಕರ ಆಯ್ಕೆ ಸರಿಯಾಗಿ ನಡೆದಿಲ್ಲ ಎಂದು ಹರವಿ ಆರೋಪಿಸಿದರೆ, ಕೃಷಿ ಅಧಿಕಾರಿ ಸುರೇಶ ದಿಕ್ಷೀತ ಬಂದ ಮೇಲೆ ಅವ್ಯವಹಾರಗಳು ನಡೆದಿವೆ, ಅವರು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ, ರೈತರಿಗೆ ಕೃಷಿ ಇಲಾಖೆಯ ಸಲಕರಣೆಗಳನ್ನು ನೀಡುವ ನೆಪದಲ್ಲಿ ಕೇವಲ ದಾಖಲಾತಿ ಫೋಟೊ ತೆಗೆಯಲು 250 ರೂಗಳ ಹಣ ವಸೂಲಿ ನಡೆದಿದೆ,  ಇಲಾಖೆಗೆ ಬಂದ ಬೀಜ ಮತ್ತು ಸಲಕರಣೆಗಳ ವಿತರಣೆಯಲ್ಲಿ ಅನುವುಗಾರರ ವೈಫಲ್ಯ ಅವ್ಯವಹಾರಕ್ಕೆ ಕಾರಣವಾಗಿದೆ ಕೂಡಲೆ ಅವರನ್ನು ಬದಲಾವಣೆ ಮಾಡಿ ಎಂದು ಶ್ರೀಕಾಂತ ಪೂಜಾರ ಆರೋಪಿಸಿದರು.

ಶಿಕ್ಷಣ ಇಲಾಖೆ : ತಾಲೂಕಿನಾದ್ಯಂತ ಸರಕಾರಿ ಶಾಲೆಗಳ ಒತ್ತುವರಿ ಮಾಡಿರುವ ಜಾಗವನ್ನು ಕೂಡಲೇ ಬಿಡಿಸಿಕೊಳ್ಳಲು ಹಾಗೂ ಶಾಲಾ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿಯ ಸಿ ಸಿ ಕ್ಯಾಮರಾಗಳು ಆದಷ್ಟು ಕಾರ್ಯ ನಿರ್ವಹಿಸುವಂತೆ ಜಾಗೃತಿವಹಿಸಿ ಏಕೆಂದರೆ ಕುನ್ನೂರ ಕಸ್ತೂರಬಾ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಸಾವಿನಂತಹ ಘಟನೆಗಳು ನಡೆಯದಿರಲಿ ಎಂಬುದು ನಮ್ಮ ಆಸೆ ಜೊತೆಗೆ ಆಯಾ ವಸತಿ ನಿಲಯಗಳ ವಾರ್ಡನ್ಗಳಿಗೆ ಮಕ್ಕಳ ಜೊತೆ ಜಾಗೃತಿಯಿಂದಿರಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಕೂಡಲೇ ಜಾಗೃತ ವಹಿಸಿ ಎಂದು ಬಿಇಓ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ಎಲ್ಲ ಸದಸ್ಯರು ಸೂಚಿಸಿದರು.

ಒಟ್ಟಾರೆ ತಾಲೂಕಿನ ಸಮಗ್ರ ಎಲ್ಲ ಇಲಾಖೆಗಳಿಗೆ ಸಂಭಂದಿಸಿದಂತೆ ಸದಸ್ಯರು ಚಚರ್ಿಸಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿ ಅಭಿವೃದ್ಧಿ ಕಾರ್ಯಗಳನ್ನು ತಕ್ಷಣವೇ ಪ್ರಾರಂಭಿಸಲು ಸಭೆಯಲ್ಲಿ ತಿಳಿಸಿದ ಕೆಲಸಗಳನ್ನು ಮುಂದಿನ ಸಭೆಯೊಳಗಾಗಿ ಪೂರ್ಣಗೊಳಿಸಿ ಸಮಗ್ರ ಮಾಹಿತಿ ನೀಡುವಂತೆ ಅಧ್ಯಕ್ಷರಿಗೆ ಸೂಚಿಸಲಾಯಿತು.

ಸಭೆಯ ಅದ್ಯಕ್ಷತೆಯನ್ನು ತಾಪಂ ಅದ್ಯಕ್ಷೆ ಪಾರವ್ವ ಆರೇರ ವಹಿಸಿದ್ದರು, ಸಭೆಯಲ್ಲಿ ಉಪಾದ್ಯಕ್ಷೆ ಪದ್ಮಾವತಿ ಪಾಟೀಲ, ಇಓ ಪ್ರಶಾಂತ ತುರಕಾಣಿ ಸೇರಿದಂತೆ ಸರ್ವ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.