ರೈತರಿಗೆ ಸಕಾಲಕ್ಕೆ ಕೃಷಿ ಪರಿಕರ ವಿತರಿಸಿ

Distribute agricultural implements to farmers on time

ಲೋಕದರ್ಶನ ವರದಿ 

ರೈತರಿಗೆ ಸಕಾಲಕ್ಕೆ ಕೃಷಿ ಪರಿಕರ ವಿತರಿಸಿ  

ಯರಗಟ್ಟಿ 21: ಕೃಷಿ ಪರಿಕರಗಳ ಮಾರಾಟಗಾರರು ಸರ್ಕಾರ ನಿಗದಿ ಪಡಿಸಿದ ಬೆಲೆಗೆ ಹಾಗೂ ಪರವಾನಗಿ  ಪತ್ರದಲ್ಲಿ ನಮೂದಿಸಿದ ಪರಿಕರಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಲೀಂ ಸಂಗತ್ರಾಸ ಹೇಳಿದರು. 

ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಹಂಗಾಮು ಪೂರ್ವ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಸಂಗ್ರಹಿಸಿ ರೈತರಿಗೆ ಸಕಾಲಕ್ಕೆ ಸರಿಯಾಗಿ ವಿತರಿಸಬೇಕು. ಕಲಬೆರಿಕೆ ಮತ್ತು ಕಾಲಾ ವಧಿ ಮೀರಿದ ರಸಗೊಬ್ಬರ, ಕೀಟನಾಶಕ ಸೇರಿದಂತೆ ಇತರ ಕೃಷಿ ಪರಿಕರಗಳನ್ನು ಮಾರಾಟ ಮಾಡಿದಲ್ಲಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಕೃಷಿ ಪರಿಕರಗಳ ಮಾರಾಟದ ರಶೀದಿಯನ್ನು ಕಡ್ಡಾಯವಾಗಿ ರೈತರಿಗೆ ನೀಡಬೇಕು ಎಂದರು. 

ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್‌ ರಸಗೊಬ್ಬರಗಳ ಬಳಕೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಸಸ್ಯಗಳ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ.ಇವುಗಳಲ್ಲಿ ಇಂಗಾಲ ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ದೊರೆಯುತ್ತದೆ. ಸಾರಜನಕ, ರಂಜಕ, ಪೊಟ್ಯಾಶ್ ಹಚ್ಚಿನ ಪ್ರಮಾಣದಲ್ಲಿ ಬೇಕಿದ್ದು ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಹಾಗೂ ಕ್ಯಾಲ್ಸಿಯಂ, ಮೆಗ್ನೀಷಿಯಂ, ಗಂಧಕ, ಕಬ್ಬಿಣ, ಜಿಂಕ್ ಇತ್ಯಾದಿ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ಬೇಕಿದ್ದು ಇವುಗಳನ್ನು ಲಘು ಪೋಷಕಾಂಶ ಎಂದು ವಿಂಗಡಿಸಲಾಗಿದೆ.ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ. ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ  ಒದಗಿಸುವ ಯೂರಿಯ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿರುತ್ತಾರೆ.  

ಆದರೆ ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಪೊಟ್ಯಾಷ್ ಅತ್ಯಂತ ಅವಶ್ಯಕವಾಗಿರುತ್ತದೆ. ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20.20.0.13, ಬರ ಮತ್ತು ರೋಗನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ  ಪೊಟ್ಯಾಷ್ ಯುಕ್ತ ರಸಗೊಬ್ಬರಗಳಾದ 10:26:26,  14:35:14, 17:17:17, 19:19:19, 20:10:10, ಇತ್ಯಾದಿ ಕಾಂಪ್ಲೆಕ್ಸ್‌ ರಸಗೊಬ್ಬರಗಳನ್ನು ಶಿಫಾರಸಿನಂತೆ  ಬಳಸಬಹುದಾಗಿದೆ. ಇದರಿಂದ ಉತ್ತಮ ಇಳುವರಿ ಪಡೆಯಲು ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.  ಎಂದು ಸಮಸ್ತ ರೈತ ಬಾಂಧವರಲ್ಲಿ ವಿನಂತಿಸಲಾಗಿದೆ. 

ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ, ಕೃಷಿ ಅಧಿಕಾರಿ ಎಸ್‌. ಎಲ್‌. ದೇಸಾಯಿ, ಎಮ್‌. ಜಿ. ಕಳಸಪ್ಪನವರ, ಸಹಾಯಕ ತಾಂತ್ರಿಕ ವವ್ಯಸ್ಥಾಪಕ ಉಮೇಶ ಯರಗಟ್ಟಿ, ಶ್ರವಣ ಶಿವಪೂಜಿ, ರೈತ ಮುಖಂಡರಾದ ಶಿವಾನಂದ ಕರಿಗೋಣ್ಣವರ, ಸೋಮು ರೈನಾಪೂರ, ರಂಗಪ್ಪ ಗಂಗರಡ್ಡಿ, ಯಕ್ಕೇರೆಪ್ಪ ಮಾಳಗಿ, ಯಕ್ಕೇರೆಪ್ಪ ಮಾಳಗಿ, ಚಿದಂಬರ ಕಟ್ಟಿಮನಿ ಹಾಗೂ ತಾಲ್ಲೂಕಿನ ಕೃಷಿ ಪರಿಕರಗಳ ಮಾರಾಟಗಾರರು ಹಾಗೂ ಇಲಾಖಾ ಸಿಬ್ಬಂದಿ ಭಾಗವಹಿಸಿದ್ದರು. 

ಹೇಳಿಕೆ:  

ಕೃಷಿ ಪರಿಕರಗಳನ್ನು ನಿಗದಿ ಪಡಿಸಿದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಕೊಂಡು ಪರವಾನಗಿ ರದ್ದುಪಡಿಸಲಾಗುವುದು. 

ಆರ್‌. ಬಿ. ಪಾಟೀಲ, ಜಿಲ್ಲಾ ಕೃಷಿ ಇಲಾಖೆ ಜಾಗೃತ ಕೋಶ, ಬೆಳಗಾವಿ