ಸಾಧನೆಗೆ ಗುರಿ ಮುಖ್ಯ ಡಾ ರಾಮಸ್ವಾಮಿ ರಾಕೇಶಯ್ಯ
ಹೂವಿನ ಹಡಗಲಿ 21: ಸಾಧನೆಗೆ ನಿರಂತರ ಅಧ್ಯಯನ ಗುರಿ ಮುಟ್ಟುವ ತವಕ ಇರಬೇಕು ಎಂದು ರಾಮ ದೇವಸ್ಥಾನದ ಧರ್ಮಕರ್ತ ಡಾ ರಾಮಸ್ವಾಮಿ ರಾಕೇಶಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಜ್ಞಾನಗಂಗಾ ಪ್ರೌಢಶಾಲೆಯಲ್ಲಿ ಮಂಗಳವಾರ ಜ್ಞಾನ ಬೆಳಕು ಅಕಾಡೆಮಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವರ್ಷದ ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ಸಾಧಕರಾಗಿ ಹೊರಹೊಮ್ಮಿದ್ದಾರೆ. ಶಿಬಿರದಲ್ಲಿ ಇರುವ ಬಹುತೇಕರು ಹಳ್ಳಿಗಾಡಿನ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಓದಿನ ಹಸಿವು ಇದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.ಪಾಲಕರು ಬರೀ ಅಂಕಗಳ ಬೆನ್ನು ಹತ್ತದೆ ಮಕ್ಕಳಲ್ಲಿ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು.ಶಾಲೆಗಳಲ್ಲಿ ಮಕ್ಕಳು ಗುರುಗಳಿಗೆ ಗೌರವ ನೀಡಬೇಕು ಎಂದು ತಿಳಿಸಿದರು.ಪತಾಂಜಲಿ ಯೋಗ ಟ್ರಸ್ಟ್ ನ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ , ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಾದೇಶ್ವರ ಕೆ ಮಾತನಾಡಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಉಪಯುಕ್ತ ಮಾಹಿತಿ ಹಂಚಿಕೊಂಡರು.ಅಕಾಡೆಮಿಯ ವಿಜಯ್ ಲಿಂಗದಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಎಸ್ ಎಂ ಜ್ಯೂಯಿಲರನ ಎಸ್ ಎಂ ಎನ್ ಶಿವರಾಜ್ ಶಿಕ್ಷಕರಾದ ಬಾರಿಕರ ವಿಶ್ವನಾಥ, ಲೋಕೇಶ್ ಅಂಗಡಿ, ಉಮೇಶ್ ಸೊಪ್ಪಿನ, ರೇಖಾ ಎಂ, ಸುಧಾ ಆರ್ ಉಪಸ್ಥಿತರಿದ್ದರು.ಗೌರವ ಸನ್ಮಾನ: ಜ್ಞಾನ ಬೆಳಕು ಅಕಾಡೆಮಿಯಲ್ಲಿ ತರಬೇತಿ ಪಡೆದು 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂಗೀತಾ ಪಾಟೀಲ್ (615) ವಿ ಬಿ ಅಂಕಿತ (613) ವಿದ್ಯಾರ್ಥಿಗಳಿಗೆ ಸಿಂಚನ ಪ್ರಕಾಶನದ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಅಕಾಡೆಮಿಯ ವತಿಯಿಂದ ವಿವಿಧ ಶಾಲೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಹ ಸತ್ಕರಿಸಿದರು.ಇದೇ ವೇಳೆ ಶಿಬಿರದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಗಣಿತ ವಿಜ್ಞಾನ ಇಂಗ್ಲಿಷ್ ಪರೀಕ್ಷೆ ವಿಜ್ಞಾನ ಚಿತ್ರ ರಂಗೋಲಿಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.