ತಾಳಿಕೋಟಿ 28: ಪಟ್ಟಣದಲ್ಲಿ ಏಪ್ರಿಲ್ 30 ರಂದು ತಾಲೂಕಾಡಳಿತ ಹಾಗೂ ಶ್ರೀ ಬಸವೇಶ್ವರ ಉತ್ಸವ ಸಮಿತಿ ಸಹಯೋಗದಲ್ಲಿ ನಡೆಯಲಿರುವ ಕರ್ನಾಟಕ ಸಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸರ್ವ ಸಮಾಜದ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದು ನ್ಯಾಯವಾದಿ ಗಂಗಾಧರ ಕಸ್ತೂರಿ ಹೇಳಿದರು.ಪಟ್ಟಣದ ಅಡತ್ ಅಸೋಸಿಯೇಶನ್ ಸಭಾಭವನದಲ್ಲಿ ರವಿವಾರ ಸಂಜೆ ಕರೆದ ಸರ್ವ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಜಯಂತಿಯ ದಿನ ನಡೆಯುವ ಕಾರ್ಯಕ್ರಮ ಮೊದಲೇ ತೆಗೆದುಕೊಂಡ ನಿರ್ಣಯಗಳಂತೆ ನಡೆಸಲು ಪ್ರಯತ್ನಿಸಬೇಕು ಇದರಿಂದ ಕಾರ್ಯಕ್ರಮದ ಶಿಸ್ತು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಬಸವೇಶ್ವರ ಉತ್ಸವ ಸಮಿತಿ ಅಧ್ಯಕ್ಷ ಮಹಾಂತೇಶ ಮುರಾಳ ಮಾತನಾಡಿ ಏಪ್ರಿಲ್ 30 ರಂದು ಮುಂಜಾನೆ 8-30 ಘಂಟೆಗೆ ಪಟ್ಟಣದ ರಾಜವಾಡೆಯಿಂದ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮೆರವಣಿಗೆಯು ಬಸವೇಶ್ವರ ವೃತಕ್ಕೆ ತಲುಪಿದ ನಂತರ ಅಲ್ಲಿ ತಾಲೂಕ ಆಡಳಿತದ ನೇತೃತ್ವದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಾ ಮಾನವತಾವಾದಿ ಬಸವಣ್ಣವರ ಕುರಿತು ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡುವರು.
ಜಯಂತಿಯ ಎಲ್ಲ ಕಾರ್ಯಕ್ರಮಗಳು ಶಿಸ್ತುಭದ್ಧವಾಗಿ ನಡೆಯುವಂತಾಗಲು 10 ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ವಹಿಸಿಕೊಡಲಾಗುತ್ತಿದೆ ಇದನ್ನು ಆಸಕ್ತಿಯಿಂದ ನಿರ್ವಹಿಸಬೇಕು ಎಂದರು. ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ ಅವರು ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯ ಇದೆ ಎಂದರು.
ಇದೆ ಸಂದರ್ಭದಲ್ಲಿ ಸರ್ವ ಸಮಾಜದ ಮುಖಂಡರು ಶ್ರೀ ಬಸವೇಶ್ವರ ಭಾವಚಿತ್ರದ ಧ್ವಜವನ್ನು ಎತ್ತಿ ಹಿಡಿದು ಜಯ ಘೋಷಣೆಗಳನ್ನು ಹೇಳಿ ಉತ್ಸವಕ್ಕೆ ಚಾಲನೆ ನೀಡಿದರು. ಸಭೆಯಲ್ಲಿ ಗಣ್ಯರಾದ ಕಲ್ಲನಗೌಡ ಪಾಟೀಲ,ಡಿ.ವಿ.ಪಾಟೀಲ,ಗುರುಸಂಗಪ್ಪ ಕಶಟ್ಟಿ,ಕಾಶಿನಾಥ ಮುರಾಳ,ಜಿ.ಜಿ.ಮದರಕಲ್ಲ, ಮಂಜುನಾಥ ಶೆಟ್ಟಿ,ಬಸವರಾಜ ಕಶಟ್ಟಿ,ಚಿಂತಪ್ಪಗೌಡ ಯಾಳಗಿ,ಮಹಾದೇವಪ್ಪ ಕುಂಬಾರ, ಸಂಗನಗೌಡ ಅಸ್ಕಿ, ನಿಂಗಣ್ಣ ಕುಂಟೋಜಿ, ಜಗದೀಶ ಬಿಳೆಭಾವಿ, ಮುತ್ತು ಕಶಟ್ಟಿ, ಈರಣ್ಣ ಕಲಬುರ್ಗಿ,ಶಿವಶಂಕರ ಹಿರೇಮಠ, ಬಾಬು ಹಜೇರಿ, ಬಸವರಾಜ ಕುಂಬಾರ, ಅಶೋಕ ಚಿನಗುಡಿ,ರವಿ ಚಂದುಕರ,ರಾಜು ಸಜ್ಜನ, ರಮೇಶ ಸಾಲಂಕಿ, ಚನ್ನಬಸ್ಸು ಸರಶೆಟ್ಟಿ ಹಾಗೂ ಸರ್ವ ಸಮಾಜದ ಗಣ್ಯರು ಹಿರಿಯರು ಇದ್ದರು.