ಜನಾಕ್ರೋಶ ಯಾತ್ರೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ನಡಹಳ್ಳಿ

Everyone's cooperation is necessary for the success of the Janakrosha Yatra: Nadahalli

ಜನಾಕ್ರೋಶ ಯಾತ್ರೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ನಡಹಳ್ಳಿ  

ತಾಳಿಕೋಟಿ 14: ರಾಜ್ಯ ಸರ್ಕಾರದ ಜನವಿರೋಧಿ ಆಡಳಿತವನ್ನು ಖಂಡಿಸಿ ಏಪ್ರಿಲ್ 17ರಂದು ವಿಜಯಪುರದಲ್ಲಿ ನಡೆಯಲಿರುವ ಜನಾಕ್ರೋಶ ಯಾತ್ರೆಗೆ ಮುದ್ದೇಬಿಹಾಳ ಮತಕ್ಷೇತ್ರದಿಂದ 10 ಸಾವಿರ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆ ಹಾಗೂ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳ ಕುರಿತು ರಾಜ್ಯ ಸರ್ಕಾರಕ್ಕೆ ಎಚ್ಚರಿಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ತಿಳಿಸಿದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 60 ವರ್ಷಗಳಲ್ಲಿ ರಾಷ್ಟ್ರದಲ್ಲಿ ಹಾಗೂ 30 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಹೇಳಿಕೊಳ್ಳುವಂತಹ ಆಡಳಿತ ನೀಡಿಲ್ಲ. ಕೇವಲ 13 ವರ್ಷಗಳಿಂದ ಕೇಂದ್ರದಲ್ಲಿರುವ ನರೇಂದ್ರ ಮೋದಿಜಿಯವರ ನೇತೃತ್ವದ ನಮ್ಮ ಪಕ್ಷದ ಸರ್ಕಾರವು ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷವು ಎಲ್ಲಾ ಹಂತಗಳಲ್ಲೂ ವಿಫಲವಾಗಿದೆ ಗ್ಯಾರಂಟಿ ಯೋಜನೆಗಳಿಂದಾಗಿ ಅನುದಾನದ ಸಮಸ್ಯೆ ಇದ್ದು ಸ್ವತಃ ಸ್ವಪಕ್ಷದ ಶಾಸಕರೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶಾಸಕ ರಾಜು ಕಾಗೆ ಅನುದಾನ ನೀಡದಿದ್ದರೆ ವಿಧಾನಸಭೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ, ಶಾಸಕ ಬಿ.ಆರ್‌.ಪಾಟೀಲರು ಅಭಿವೃದ್ಧಿ ಕುರಿತು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿಕೆ ನೀಡಿರುವುದು ಈ ಸರ್ಕಾರದ ಅಧೋಗತಿಯನ್ನು ತಿಳಿಸುತ್ತದೆ ಎಂದರು. ಜಾತಿಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ರಾಜ್ಯ ಸರ್ಕಾರ ಮಾಡುತ್ತಿರುವುದು ಕೇವಲ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಎಂದ ಅವರು ಸಿಎಂ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಲು ಈ ವಿಷಯವನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು ಯತ್ನಾಳರ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. 

ಜನಾಕ್ರೋಶ ಕಾರ್ಯಕ್ರಮಕ್ಕೆ ಪ್ರತಿ ಬೂತ್ ಮಟ್ಟದಿಂದ ಒಬ್ಬ ಕಾರ್ಯಕರ್ತ ಕನಿಷ್ಠ ಐದು ಜನರನ್ನು ಕರೆ ತರಬೇಕು ಇದರಲ್ಲಿ ಓರ್ವ ರೈತ,ಮಹಿಳೆ,ಯುವಕ, ದಲಿತ ಹಾಗೂ ಹಿಂದುಳಿದ ವರ್ಗದ ಒಬ್ಬ ವ್ಯಕ್ತಿ, ಇದು ಪಕ್ಷದ ಆದೇಶವಾಗಿದ್ದು ಇದನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.  

ಮುಖಂಡರಾದ ಕಾಶಿನಾಥ ಮುರಾಳ, ಎಂ.ಎಸ್‌.ಸರಶೆಟ್ಟಿ ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಎಂ.ಆರ್‌.ಪಾಟೀಲ ವಕೀಲರು, ಎಸ್ಸಿ ಮೋರ್ಚಾ ಅಧ್ಯಕ್ಷ ಮಲ್ಲಣ್ಣ, ರಾಜುಗೌಡ ಗುಂಡಕನಾಳ, ಪ್ರಕಾಶ್ ಹಜೇರಿ, ಮಾನಸಿಂಗ್ ಕೊಕಟನೂರ, ಜೈ ಸಿಂಗ್ ಮೂಲಿಮನಿ,ರಾಘು ವಿಜಯಪುರ, ಈಶ್ವರ್ ಹೂಗಾರ, ವಿಠಲ ಮೋಹಿತೆ ಪಕ್ಷದ ಕಾರ್ಯಕರ್ತರು ಇದ್ದರು.