ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿ ಕೆ.ಐ.ಡಿ.ಬಿ ಗೆ ಬಿಟ್ಟುಕೊಡುವುದಿಲ್ಲ : ರೈತರ ಆಕ್ರೋಶ

Fertile agricultural land will not be given to KIDB for any reason: Farmers' outrage

ಲೋಕದರ್ಶನ ವರದಿ 

ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿ ಕೆ.ಐ.ಡಿ.ಬಿ ಗೆ ಬಿಟ್ಟುಕೊಡುವುದಿಲ್ಲ : ರೈತರ ಆಕ್ರೋಶ 

ವಿಜಯಪುರ 21;  ಸಮೀಪದ ತಿಡಗುಂದಿ ವ್ಯಾಪ್ತಿಯಲ್ಲಿ ಕರ್ನಾಟಕ - ಮಹಾರಾಷ್ಟ್ರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52ಕ್ಕೆ ಹೊಂದಿಕೊಂಡ 1203 ಎಕರೆ ರೈತರ ಕೃಷಿ ಭೂಮಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯ ಸರ್ಕಾರ ಇಂಡಸ್ಟ್ರೀಯಲ್ ಹಬ್ ನಿರ್ಮಾಣಕ್ಕೆ ಮುಂದಾಗಿ ಭೂಸ್ವಾಧೀನಕ್ಕೆ ಒಳಗಾಗುವ ರೈತರಿಗೆ 3  ಬಾರಿ ನೋಟಿಸ್ ನೀಡಿ ಮೇ 19 ರಿಂದ 29 ದಿನಗಳ ವರೆಗೆ  ಭೂಮಿಗಳ ಸರ್ವೇ ಮಾಡಲು ಅಧಿಕಾರಿಕಾರಿಗಳು ಬರುತ್ತಿದ್ದಾರೆ ಎಂದು ತಿಳಿದ 230ಕ್ಕೂ ಅಧಿಕ ರೈತರು ಕಪ್ಪು ಬಟ್ಟೆ ಧರಿಸಿ ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಬಿಟ್ಟುಕೊಡುವುದಿಲ್ಲ ಎಂದು ಅಧಿಕಾರಿಗಳನ್ನು ಮರಳಿ ಕಳುಹಿಸಿದರು. 

ಮುಖಂಡರಾದ ಗೀರೀಶ ತಾಳಿಕೋಟಿ ಮಾತನಾಡಿ ಈಗಾಗಲೇ 230 ರೈತರ ಆಕ್ಷೇಪಣಾ ಪತ್ರವನ್ನು ರಾಜ್ಯ ಸರ್ಕಾರಕ್ಕೆ, ಬೃಹತ್ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರಿಗೆ, ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸಲ್ಲಿಸಿ ಯಾವ ರೈತರು ಭೂಮಿಯನ್ನು ಬಿಟ್ಟಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ, ಆದರೂ ಕೂಡಾ ಇಂದು ಸರ್ವೇ ಮಾಡಲು ಆಗಮಿಸುತ್ತಿರುವುದು ರೈತವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ. ಜೀವ ಹೋದರು ಈ ಭೂಮಿ ಬಿಟ್ಟುಕೊಡುವ ಮಾತೆ ಇಲ್ಲ. 

ಅನೇಕ ಪದವಿದರರು ಬೇರೆಡೆಗೆ ನೌಕರಿ ಮಾಡುವುದನ್ನು ಬಿಟ್ಟು ಕೃಷಿ ಮಾಡಲು ಸ್ವಗ್ರಾಮಕ್ಕೆ ಆಗಮಿಸಿರುವುವವರು ಇದ್ದಾರೆ, ಇದೇ ಕೈಗಾರಿಕಾ ಸಚಿವರು ನೀರಾವರಿ ಸಚಿವರಾಗಿದ್ದಾಗ ನಮ್ಮ ಭೂಮಿಗಳಿಗೆ ನೀರು ಮಾಡಿಕೊಟ್ಟಿದ್ದರು, ಅವರಿಗೆ ಇಡೀ ಸಂಪೂರ್ಣ ಗ್ರಾಮಸ್ತರೇ ಧನ್ಯವಾದ ತಿಳಿಸಿ ಸನ್ಮಾನಿಸಿದ್ದೆವೂ, ಆದರೆ ಈಗ ಅದೇ ನೀರನ್ನ ಎಲ್ಲಾ ರೈತರಿಗೂ ಬಿಟ್ಟು ಕೈಗಾರಿಕೆ ಮಾಡಲು ಹೊರಟ್ಟಿದ್ದಾರೆ, ರೈತರಿಗಿಂತ ಇವರಿಗೆ ಕೈಗಾರಿಕೆಯೇ ಮುಖ್ಯವಾಯಿತೇ ಎಂಬುದು ರೈತರ ಪ್ರಶ್ನೆಯಾಗಿದೆ. ಫಲವತ್ತಾದ ಕೃಷಿ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಕುಟುಂಬ ಸಮೇತ ಗುಳೆ ಹೋಗಬೇಕಾಗುತ್ತದೆ ಎಂದು ಹಿರಿಯ ರೈತರಾದ ಈಶ್ವರ​‍್ಪ ಬೆಳ್ಳುಂಡಗಿ ತೀವ್ರ ಅಸಮಾಧಾನವನ್ನು ಹೊರಹಾಕಿದರು. 

ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು ಇಲ್ಲ ಮುಂದಿನ ಹೋರಾಟ ಉಗ್ರಸ್ವರೂಪ ತಾಳಿ ಮುಂದೆ ಆಗುವ ಎಲ್ಲದಕ್ಕೂ ಜಿಲ್ಲಾ ಉಸ್ತುವಾರಿ ಸಚಿವರೆ ನೇರ ಹೊಣೆಗಾರರಾಗುತ್ತಾರೆ ಎಂದು ಮಡಿವಾಳಪ್ಪ ತಿಲ್ಲಿಹಾಳ ಅವರು ಎಚ್ಚರಿಸಿದರು. 

ಬಾಕ್ಸ್‌ ಸುದ್ದಿ  : 

ಈ ಗ್ರಾಮವೂ ಸಂಪೂರ್ಣ ಕೃಷಿ ಅವಲಂಬಿತವಾಗಿದ್ದು, ಇಲ್ಲಿ ಅತ್ಯಂತ ಫಲವತ್ತಾದ ಕೃಷಿ ಭೂಮಿ ಇರುವುದರಿಂದ ಇಲ್ಲಿ ಲಿಂಬೆ, ದಾಳಿಂಬೆ, ದ್ರಾಕ್ಷಿ, ಕಬ್ಬು ಸೇರಿದಂತೆ ಹಲವಾರು ಹಣ್ಣು, ತರಕಾರಿ, ಮೆಕ್ಕೆಜೋಳ, ಹತ್ತಿ, ತೊಗರಿ ಇವುಗಳಿಂದ ಬರುವ ಬೆಳೆ ಹಾಗೂ ಆದಾಯದಿಂದ ಇಲ್ಲಿಯ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸದರಿ ಭೂಮಿಯನ್ನು ವಶಕೊಡಿಸಿಕೊಂಡರೆ ರೈತಾಪಿ ವರ್ಗದ ಜೀವನವೂ ದುರ್ಬಲಾಗುತ್ತದೆ. ಮುಂದಿನ ರೈತರ ಮಕ್ಕಳು ಬೀದಿ ಪಾಲಾಗಬೇಕಾಗುತ್ತದೆ. ಯಾವುದೇ ಯೋಜನೆಗಳು ರೈತರನ್ನು ಉದ್ಧಾರ ಮಾಡುವಂತಿರಬೇಕು, ಒಕ್ಕಲೆಬ್ಬಿಸುವಂತಾಗಬಾರದು, ಈ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು, ಇಲ್ಲ ಕೃಷಿಗೆ ಯೋಗ್ಯವಲ್ಲದ ಭೂಮಿಗೆ ಈ ಯೋಜನೆ ಸ್ಥಳಾಂತರಿಸಬೇಕು. ಸಂಗಮೇಶ ಸಗರ (ಜಿಲ್ಲಾಧ್ಯಕ್ಷರು, ವಿಜಯಪುರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ) 

ರಾಮನಗೌಡ ಪಾಟೀಲ, ಮಡಿವಾಳಪ್ಪ ತಿಲ್ಲಿಹಾಳ, ಗೋಪಾಲ ಭೋಸಲೆ, ಬಂದ್ಗಿಸಾಬ್ ವಾಲಿಕಾರ, ಸಿದ್ದರಾಯ ತಿಲ್ಲಿಹಾಳ, ಮದನಗೌಡ ಬಿರಾದಾರ, ಅಶೋಕಗೌಡ ಬಿರಾದಾರ, ಅಶೋಕಗೌಡ ಪಾಟೀಲ, ಕಲ್ಲಪ್ಪ ಕುರಬರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು. 


ಅಧಿಕಾರಿಗಳೊಂದಿಗೆ ರೈತರ ವಾಗ್ವಾದ : 

ತಿಳವಳಿಕೆ ಪತ್ರದ ಪ್ರಕಾರ ಅಳತೆ ಕಾರ್ಯ (ಜೆ.ಎಂ.ಸಿ) ಮಾಡಲು ಬಂದ್ ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧಿನಾಧಿಕಾರಿಗಳೊಂದಿಗೆ ತಿಡಗುಂದಿ ರೈತರು ತೀವ್ರ ಗಲಾಟೆ ಮಾಡಿ ಮರಳಿ ಹೋಗುವಂತೆ ಪಟ್ಟು ಹಿಡಿದರು, ಅನಿವಾರ್ಯವಾಗಿ ಅಧಿಕಾರಿಗಳು ಕಾಲುಕಿತ್ತ ಘಟನೆ ನಡೆಯಿತು.