ಮಾಜಿ ಟ್ರೈನಿ ಐಎಎಸ್ ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು

Former IAS trainee Pooja Khedkar granted anticipatory bail

ನವದೆಹಲಿ 21: 2022 ರ ನಾಗರಿಕ ಸೇವೆಗಳ ಪರೀಕ್ಷೆಗೆ ಅರ್ಹತೆ ಪಡೆಯಲು ದಾಖಲೆಗಳನ್ನು ನಕಲಿ ಮಾಡಿದ ಆರೋಪ ಹೊತ್ತಿರುವ ಮಾಜಿ ಐಎಎಸ್ ತರಬೇತಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗೆ ಹಾಜರಾಗುವಾಗ ತಮ್ಮ ಕುಟುಂಬದ ಆದಾಯದ ಸ್ಥಿತಿ ಮತ್ತು ಇತರ ವಿವರಗಳನ್ನು ತಪ್ಪಾಗಿ ದಾಖಲಿಸಿರುವ ಆರೋಪದ ಮೇಲೆ ಖೇಡ್ಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.

ತರುವಾಯ, ದಾಖಲೆಗಳನ್ನು ತಿರುಚುವಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ UPSC ಅವರ ಆಯ್ಕೆಯನ್ನು ರದ್ದುಗೊಳಿಸಿತು. ಸಂಸ್ಥೆಯು ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗುವುದರಿಂದ ಖೇಡ್ಕರ್ ಅವರನ್ನು ಶಾಶ್ವತವಾಗಿ ನಿಷೇಧಿಸಲಾಯಿತು.

ಒಬಿಸಿ ಮತ್ತು ಅಂಗವಿಕಲ ಕೋಟಾದಡಿಯಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಪರೀಕ್ಷೆಗೆ ಹಾಜರಾಗಲು ಪ್ರಯತ್ನಿಸಿದ ಆರೋಪ ಪೂಜಾ ಅವರ ಮೇಲಿತ್ತು. ಈ ಹಿಂದೆ ದೆಹಲಿ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು, ನಂತರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ವಂಚನೆ ಪ್ರಕರಣದ ತನಿಖೆಗೆ ಸಹಕರಿಸುವಂತೆ ಖೇಡ್ಕರ್ ಅವರಿಗೆ ನಿರ್ದೇಶನ ನೀಡಿದೆ. ಆದಾಗ್ಯೂ, ದೆಹಲಿ ಪೊಲೀಸರ ವಕೀಲರು ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದನ್ನು ತೀವ್ರವಾಗಿ ವಿರೋಧಿಸಿದರು, ತನಿಖೆಯಲ್ಲಿ ಅವರು ಸಹಕರಿಸದಿರುವುದು ಮತ್ತು ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಹೇಳಿದರು. ಇದನ್ನು ಆಲಿಸಿದ ಪೀಠ ಖೇಡ್ಕರ್ ಅಂತದ್ದೇನು ಗಂಭೀರ ಅಪರಾಧ ಮಾಡಿದ್ದಾರೆ “ಆಕೆ ಮಾದಕ ದ್ರವ್ಯ ವ್ಯಸನಿಯಲ್ಲ ಅಥವಾ ಭಯೋತ್ಪಾದಕಿ ಅಲ್ಲ. ಆಕೆ ಕೊಲೆ ಮಾಡಿಲ್ಲ. ಆಕೆ ಎನ್‌ಡಿಪಿಎಸ್ ಅಪರಾಧಿಯೂ ಅಲ್ಲ. ನಿಮಗೆ ಒಂದು ವ್ಯವಸ್ಥೆ ಅಥವಾ ಸಾಫ್ಟ್‌ವೇರ್ ಇರಬೇಕು. ನೀವು ತನಿಖೆಯನ್ನು ಪೂರ್ಣಗೊಳಿಸಿ. ಆಕೆ ಎಲ್ಲವನ್ನೂ ಕಳೆದುಕೊಂಡಿದ್ದಾಳೆ ಇನ್ನು ಎಲ್ಲಿಯೂ ಆಕೆಗೆ ಸಿಗುವುದಿಲ್ಲ” ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದೆ. “ಪ್ರಕರಣದ ವಾಸ್ತವಾಂಶ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ, ದೆಹಲಿ ಹೈಕೋರ್ಟ್ ಅರ್ಜಿದಾರರಿಗೆ ಜಾಮೀನು ನೀಡಬೇಕಾಗಿದ್ದ ಸೂಕ್ತ ಪ್ರಕರಣ ಇದು ಎಂದು ಪೀಠ ಹೇಳಿದೆ.