ಜಾಗತಿಕ ಪ್ರತಿಷ್ಠಿತ ಬೂಕರ್ ಸಾಹಿತ್ಯ ಪ್ರಶಸ್ತಿ : ಬಾನು ಮುಸ್ತಾಕ್
ಹಾವೇರಿ 21 : ಕನ್ನಡದ ಹೆಸರಾಂತ ಸಾಹಿತಿ, ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಜಾಗತಿಕ ಪ್ರತಿಷ್ಠಿತ ಬೂಕರ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವುದನ್ನು ನಗರದ ತಾಯಿ ಸೇವಾ ಫೌಂಡೇಶನ್ ಸ್ವಾಗತಿಸಿ ಅವರನ್ನು ಅಭಿನಂದಿಸಿದೆ. ಬಾನು ಅವರ "ಹಸೀನಾ ಮತ್ತು ಇತರ ಕಥೆಗಳು" ಕೃತಿ ಇಂಗ್ಲಿಷ್ಗೆ ಅನುವಾದಿತ "ಹಾರ್ಟ್ ಲ್ಯಾಂಪ್"ಗೆ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯನ್ನುಂಟು ಮಾಡಿದೆ. 12 ಕಥೆಗಳನ್ನು ಒಳಗೊಂಡ ಈ ಕಥಾಸಂಕಲನವನ್ನು ದೀಪಾ ಭಸ್ತಿ ಕನ್ನಡದಿಂದ ಇಂಗ್ಲೀಷ್ಗೆ ಅನುವಾದಿಸಿರುವರು. ಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಕನ್ನಡತಿ ಹಾಗೂ ವಿಶ್ವದ ಮೊದಲ ಕಥಾ ಸಂಕಲನ ವಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಗರಿ ಮೂಡಿದೆ.ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ಕನ್ನಡಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಫೌಂಡೇಶನ್ ಸಂಸ್ಥಾಪಕರು ಆಗಿರುವ ಸಾಹಿತಿ ಹನುಮಂತಗೌಡ ಗೊಲ್ಲರ, ಗೌರವ ಸಲಹೆಗಾರ ಹೇಮಗಿರಿಗೌಡ ಗೊಲ್ಲರ, ಮಾಲತೇಶ್, ನಾರಾಯಣ, ಕೃಷ್ಣಮೂರ್ತಿ ಮತ್ತಿತರ ಪದಾಧಿಕಾರಿಗಳು ಬಾನು ಅವರನ್ನು ಅಭಿನಂದಿಸಿದ್ದಾರೆ.