ಕಲಬುರಗಿ 22: ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕಲಬುರಗಿ ಈಜುಪಟುಗಳು ಉತ್ತಮ ಪ್ರದರ್ಶನ ನೀಡಿ ಪದಕ ವಿಜೇತರಾಗಿದ್ದಾರೆ.
ಶಿವಮೊಗ್ಗದಲ್ಲಿ ಮೇ 18 ರಿಂದ ಮೂರು ದಿನಗಳ ಕಾಲ ನೆಡೆದ ಕ್ರೀಡಾಕೂಟವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಕಲಬುರಗಿ ಸರಕಾರಿ ನೌಕರರ ಸಂಘದ ವತಿಯಿಂದ ಭಾಗವಹಿಸಿ 45ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಭಾಗೀಯ ಆಹಾರ ಪ್ರಯೋಗಾಲಯದ ಹಿರಿಯ ಆಹಾರ ವಿಶ್ಲೇಷಣ ಅಧಿಕಾರಿ ಲೋಕೇಶ್ ಪೂಜಾರ್ 50ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬಂಗಾರ, 50ಮೀ.ಬಟರ್ ಫ್ಲೈ ನಲ್ಲಿ ಬೆಳ್ಳಿ ಹಾಗೂ 50ಮೀ ಪ್ರೀ ನಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ವಿಭಾಗೀಯ ಅಧಿಕಾರಿ ರಾಜಶ್ರೀ ಎಮ್ .ಎಸ್. ಅವರು 100 ಮೀ.ಬಟರ್ ಫ್ಲೈ ಹಾಗೂ 100 ಮೀ ಬ್ಯಾಕ್ ಸ್ಟ್ರೋಕ್ ವಿಭಾಗಗಳಿಂದ ಬೆಳ್ಳಿಯ ಪದಕ,100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಪಶು ಸಂಗೋಪನ ಇಲಾಖೆಯ ರೇಖಾ ಯಾನಿ ಅವರು 100 ಮೀ.ಬಟರ್ ಫ್ಲೈ ಯಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಇವರ ಸಾಧನೆಗೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಬಳೂರಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತ್ ಅಷ್ಟಗಿ ಮತ್ತು ಈಜುಕೊಳ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.