ಧಾರಾಕಾರವಾಗಿ ಸುರಿದ ಕೃತ್ತಿಕಾ: ಅನ್ನದಾತನ ಮೊಗದಲ್ಲಿ ಮಂದಹಾಸ
ಬಿರುಸುಗೊಂಡ ಕೃಷಿ ಚಟುವಟಿಕೆ*ಮುಂಗಾರು ಬೆಳೆ ಬೀಜ ಬಿತ್ತಲು ಸಿದ್ಧತೆ
ಸಂತೋಷ್ ಕುಮಾರ್ ಕಾಮತ್
ಮಾಂಜರಿ : ಧಾರಾಕಾರವಾಗಿ ಸುರಿದ ಕೃತ್ತಿಕಾ ಮಳೆ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಮಳೆಯ ಆರಂಭದಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿವೆ. ಭೂಮಿ ಹದವಾಗಿದ್ದು, ಸಜ್ಜೆ, ಉದ್ದು, ಸೋಯಾಬಿನ್ ತೊಗರಿ, ಈರುಳ್ಳಿ, ಹೆಸರು ಬಿತ್ತಲು ಜೋರು ತಯಾರಿ ನಡೆದಿದೆ
ಮುಖ್ಯವಾಗಿ ಚೀಕೊಡಿ ತಾಲೂಕಿನಲ್ಲಿ ಮುಕ್ಕಾಲು ಪಾಲು ಕೃಷಿಯನ್ನು ಕಬ್ಬು ಆವರಿಸಿಕೊಂಡಿದೆ. ವಾರ್ಷಿಕ ಬೆಳೆಯಾಗಿರುವ ಕಬ್ಬಿಗೆ ನಿರಂತರ ನೀರಿನ ಅಗತ್ಯತೆ ಬೇಕು. ಚಳಿಗಾಲ-ಮಳೆಗಾಲದಲ್ಲಿ ನೀರಿನ ಅಭಾವ ಎದ್ದು ಕಾಣಲ್ಲ. ಆದರೆ ಬೇಸಿಗೆಯಲ್ಲಿ ಬಹುತೇಕ ಕಬ್ಬು ನೀರಿಲ್ಲದೆ ಒಣಗುವ ಹಂತಕ್ಕೆ ಬಂದಿರುತ್ತದೆ. ಈ ಬಾರಿಯೂ ಹಲವಾರು ಕಡೆ ನೀರಿಲ್ಲದೆ ಕಬ್ಬು ಒಣಗುವ ಹಂತ ತಲುಪಿತ್ತು. ಸುರಿದ ಮಳೆಯಿಂದ ಜಮೀನುಗಳಲ್ಲಿ ಕಬ್ಬು ನಳನಳಿಸುತ್ತಿದ್ದು, ರೈತರಿಗೆ ಮರುಜೀವ ಬಂದಂತಾಗಿದೆ.
ರೈತರಿಗೆ ಡಬಲ್ ಧಮಾಕ: ಚಿಕ್ಕೋಡಿ ತಾಲೂಕಿನ ರೈತರ ಪಾಲಿಗೆ ಈ ಮಳೆ ಡಬಲ್ ಧಮಾಕ ತಂದಿದೆ ಎಂದೇ ಹೇಳಬಹುದು. ಬೇಸಿಗೆಯಲ್ಲಿ ಜನಜಾನುವಾರುಗಳ ಕುಡಿಯುವ ನೀರಿಗಾಗಿ ಮುತುವರ್ಜಿ ವಹಿಸಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸರಕಾರಕ್ಕೆ ಕೋಯನಾ ಜಲಾಶಯದಿಂದ ಎರಡು ಟಿಎಂಸಿ ನೀರು ಕೃಷ್ಣ ನದಿಗೆ ಬಿಡಲು ಪತ್ರ ಮುಖಾಂತರ ಕೇಳಿಕೊಂಡಿದ್ದರು ಆದರೆ ಈಗ ಬೆಳೆದ ನಾಲ್ಕೈದು ದಿನಗಳಿಂದ ಕೃತಿಕಾ ಮಳೆ ಸುರಿಯುತ್ತಿದ್ದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿರುವ ರಾಜಪುರ ಬ್ಯಾರೇಜ್ ಓವರ್ ಫ್ಲೋ ಆಗಿ ನೀರು ಹರಿದು ಬಂದು ಕೃಷ್ಣಾ ನದಿ ಒಡಲು ತುಂಬಿಕೊಂಡಿದೆ. ಇದರಿಂದ ಬೇಸಿಗೆಯಿಂದ ಬತ್ತಿದ್ದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಮರುಪೂರಣಗೊಂಡು ಬೋರ್ ವೆಲ್‌ಗಳಲ್ಲಿ ನೀರು ಧುಮ್ಮಿಕ್ಕಲು ಆರಂಭಿಸಿದೆ. ಅದೇ ವೇಳೆ ಧಾರಾಕಾರ ಸುರಿದ ಮಳೆಯಿಂದ ಕನಿಷ್ಠ ಒಂದು ವಾರದವರೆಗಾದರೂ ಭೂಮಿ ತೇವಾಂಶ ಕಾಪಾಡಿಕೊಳ್ಳಲಿದೆ.
ವಾತಾವರಣದಲ್ಲಿ ಕೂಲ್ ಕೂಲ್: ಎರಡೂರು ದಿನಗಳ ಹಿಂದೆ 35-38ರವರೆಗೂ ದಾಖಲಾಗುತ್ತಿದ್ದ ಉಷ್ಣಾಂಶ ರವಿವಾರ ಮಂಗಳವಾರ ಮತ್ತು ಬುಧವಾರರಂದು ಸುರಿದ ಮಳೆಯಿಂದ 30ರ ಆಸುಪಾಸಿಗೆ ಸರಿದಿದೆ. ಪರಿಣಾಮ ಬೇಸಿಗೆಯಲ್ಲಿ ಜೋರಾಗಿದ್ದ ತಂಪು ಪಾನೀಯಗಳ ವ್ಯಾಪಾರ ಏಕಾಏಕಿ ಕುಸಿತ ಕಂಡಿದೆ. ಬೇಸಿಗೆ ಧಗೆಯಿಂದ ಕಂಗಾಲಾಗಿದ್ದ ಸಾರ್ವಜನಿಕರಿಗೆ ಮಳೆಯಿಂದ ಉಂಟಾಗಿರುವ ತಂಪಿನ ವಾತಾವರಣ ಆಹ್ಲಾದಕರ ಮುದ ನೀಡುತ್ತಿದೆ. ಕಾದ ಕಾವಲಿಯಂತಾದ ಭೂಮಿಗೆ ಮಳೆ ತಂಪೆರೆದು ಅನ್ನದಾತರಲ್ಲಿ ಹೊಸಹುಮ್ಮಸ್ಸು ತುಂಬಿದೆ.
ಕೋಟ್
ಕಳೆದ ನಾಲ್ಕು ಐದು ದಿನಗಳಿಂದ ಕೃಷ್ಣಾ ನದಿ ದಡದ ಗ್ರಾಮಗಳಲ್ಲಿ ಮಳೆಯಿಂದಾಗಿ ಮುಂಗಾರು ಬಿತ್ತನೆಗೆ ಹೆಚ್ಚುಅನುಕೂಲು ಆಗಿದೆ. ಭೂಮಿ ಹದವಾಗಿದ್ದು ಕೃಷಿ ಚಟುವಟಿಕೆಗೆ ಹೆಚ್ಚು ಅನುಕೂಲಕರವಾಗಿದೆ.
ಪ್ರಭಾಕರ್ ಶಿಂದೆ
ಯುವ ರೈತ ಅಂಕಲಿ
ಮುಂಗಾರು ಹಂಗಾಮು ಉತ್ತಮ ಆರಂಭ ನೀಡಿದ್ದು, ರೈತರಿಗೆ ಅಗತ್ಯಕ್ಕೆ ಅನುಗುಣವಾದ ಬೀಜ, ಗೊಬ್ಬರದ ದಾಸ್ತಾನು ಎರಡೂ ಮೂರು ನಾಲ್ಕು ದಿನದಲ್ಲಿ ಸಂಗ್ರಹ ಮಾಡಲಾಗುವುದು. ರೈತರ ಅಗತ್ಯಕ್ಕೆ ತಕ್ಕಂತೆ ಬೀಜ ಗೊಬ್ಬರ ವಿತರಣೆಗೆ ಸಕಲ ಕ್ರಮ ವಹಿಸಲಾಗುವುದು.
* ರಾಹುಲ್ ಇಚಲಕರಂಜಿ
ಹೊಸ ಗೊಬ್ಬರ ಮತ್ತು ಬೀಜ ಮಾರಾಟಗಾರ ಮಾಂಜರಿ