ಸರ್ಕಾರ ಜೈನರಿಗೆ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಲಿ;
ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಗುಣಧರನಂದಿ ಮುನಿಮಹಾರಾಜರು..!
ಕಾಗವಾಡ 21: ರಾಜ್ಯ ಸರ್ಕಾರ ಜೈನ ಸಮುದಾಯಕ್ಕೆ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಜೂ. 06 ರಿಂದ ಜೂ. 08 ರ ವರೆಗೆ 3 ದಿನಗಳ ಜೈನ ಸಮಾವೇಶವ ಹಮ್ಮಿಕೊಂಡಿದ್ದು, ರಾಜ್ಯಪಾಲರ ಸಮ್ಮುಖದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇಷ್ಟಾಗಿಯೂ ಸರ್ಕಾರ ಜಗ್ಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮುನಿಮಹಾರಾಜರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರು ಬುಧವಾರ ದಿ. 21 ರಂದು ಐನಾಪೂರ ಪಟ್ಟಣದ ಭಗವಾನ ಆದಿನಾಥ ದಿಗಂಬರ ಜಿನ ಮಂದಿರದ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈಗಾಗಲೇ ರಾಜ್ಯ ಸರ್ಕಾರ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಅಲ್ಪಸಂಖ್ಯಾತ ಇಲಾಖೆಯ ಸಚಿವ ಜಮೀರ ಅಹಮದಖಾನ ಸೇರಿದಂತೆ ಅನೇಕ ಮಂತ್ರಿಗಳು ಜೈನ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಮತ್ತು ಇನ್ನೂ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಆದರೇ ಇಲ್ಲಿಯ ವರೆಗೆ ಈಡೇರಿಸಿಲ್ಲ. ನಾವು ಕೊನೆಯದಾಗಿ ಕರ್ನಾಟಕದ ರಾಜ್ಯಪಾಲರಾದ ಥಾವರಚಂದ ಗಲ್ಹೋತ ಅವರ ಮುಖಾಂತರ ಮನವಿ ಸಲ್ಲಿಸಿ, ಭರವಸೆಗಳ ಈಡೇರಿಕೆಗೆ ಆಗ್ರಹಿಸಲಿದ್ದೇವೆ. ಸರ್ಕಾರ ನಮ್ಮ ಭರವಸೆಗಳನ್ನು ಈಡೇರಿದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಜೈನ ಸಮುದಾಯ, ಜೈನ ಮುನಿಗಳ ಮತ್ತು ಭಟ್ಟಾರಕರ ನೇತೃತ್ವದಲ್ಲಿ ಉಗ್ರವಾದ ಹೋರಾಟಕ್ಕೆ ಇಳಿಯಲಿದೆ ಈ ಕುರಿತು ಈ ಸಮ್ಮೇಳನದಲ್ಲಿ ಮಹತ್ವದ ನಿರ್ದಾರ ಪ್ರಕಟಿಸಲಿದ್ದೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜೈನ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಚರ್ಚಿಸಲು 3 ದಿನಗಳ ಜೈನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಸ್ತ ಭಟ್ಟಾರಕರ ನೇತೃತ್ವದಲ್ಲಿ ಸಾಮಾಜಿಕ ಚಿಂತನೆ ಗೋಷ್ಠಿಗಳು, ಉತ್ತರ ಕರ್ನಾಟಕದ ಸಮಸ್ತ ಉಪಾದ್ಯಾಯರ ಸನ್ಮಾನ, ಜೈನ ಮಹಿಳಾ ಮಂಡಳ, ಯುವಕ ಮಂಡಳ ಮತ್ತು ಯುವತಿ ಮಂಡಳಗಳ ಸಮಾವೇಶ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರಚಂದ ಗಲ್ಹೋತ, ಸೇರಿದಂತೆ ಬೆಳಗಾವಿ, ಬಾಗಲಕೋಟ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಸಂಸದರು ಮಾಜಿ ಶಾಸಕರು ಮತ್ತು ಜೈನ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದು, ಲಕ್ಷಾಂತರ ಜೈನ ಶ್ರಾವಕ-ಶ್ರಾವಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜೈನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ನಮ್ಮ ಸಂದೇಶವನ್ನು ರವಾನಿಸೋಣ ಎಂದು ಜೈನ ಸಮುದಾಯಕ್ಕೆ ಆಹ್ವಾನ ನೀಡಿದರು.
ಈ ಸಮಯದಲ್ಲಿ ಐನಾಪೂರದ ಪಟ್ಟಣದ ಜೈನ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಜೈನ ಸಮುದಾಯದ ಈಡೇರಬೇಕಾಗಿರುವ ಪ್ರಮುಖ ಬೇಡಿಕೆಗಳು:-
1. ಜೈನ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು.
2. ಜೈನ ಮುನಿಗಳಿಗೆ ಆಚಾರ್ಯರಿಗೆ ಮತ್ತು ಭಟ್ಟಾರಕರಿಗೆ ರಕ್ಷಣ ಒದಗಿಸಬೇಕು.
3. ಆರ್ಥಿಕವಾಗಿ ಕೆಳವರ್ಗದ ಜೈನ ಸಮುದಾಯದವರಿಗೆ ಜೈನ ತೀರ್ಥಕ್ಷೇತ್ರದ ದರ್ಶನಕ್ಕೆ ಇತರೇ ಅಲ್ಪಸಂಖ್ಯಾತರಿಗೆ ನೀಡುವಂತೆ ಸಬ್ಸಿಡಿ ನೀಡಬೇಕು.
4. ಈ ಮೊದಲು ಜೈನ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದ ಶಿಕ್ಷಣ ಸ್ಕಾಲರ್‌ಶಿಪ್ ಪುನಃ ಪ್ರಾರಂಭಿಸಬೇಕು.
5. ಜಾತಿ ಗಣತಿಯಲ್ಲಿ ಜೈನ ಸಮುದಾಯಕ್ಕಾದ ಲೋಪಗಳನ್ನು ಸರಿಪಡಿಸಿ ವೈಜ್ಞಾನಿಕವಾಗಿ ಪುನಃ ಗಣತಿಯಾಗಬೇಕು.