ಬೆಳಗಾವಿ 22: ನ್ಯಾಯಾಧೀಶ ಮುರಳಿ ಮೋಹನ ರೆಡ್ಡಿ ಅವರು ಸಂಸ್ಥೆಯ ನಿವಾಸಿಗಳಿಗೆ ಪ್ರಾಧಿಕಾರ ವತಿಯಿಂದ ಕೆಳ ಹಂತದ ನ್ಯಾಯಾಲಯದಿಂದ ಸರ್ವೊಚ್ಛ ನ್ಯಾಯಾಲಯದವರೆಗೆ ಕಾನೂನು ನೆರವುಗಳನ್ನು ನೀಡಿರುತ್ತಾರೆ. ಅವರು ತಾಳ್ಮೆ ಸಹನೆಯ ಪ್ರತಿರೂಪವಿದ್ದಂತೆ ಅವರಿಂದ ಅನೇಕ ವಿಷಯಗಳನ್ನು ನಾವೆಲ್ಲರು ಕಲಿತಿರುತ್ತೇವೆ ಎಂದು ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣುರ ಅವರು ಹೇಳಿದರು.
ಅವರು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮುರಳಿ ಮೋಹನ ರೆಡ್ಡಿ ಇವರ ವರ್ಗಾವಣೆ ನಿಮಿತ್ಯ ದಿ.21ರಂದು ಆಯೋಜಿಸಲಾಗಿದ್ದ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅನೇಕ ಜನ ಬಡ ನಿವಾಸಿಗಳು ಇವರ ಸೇವಾವಧಿಯಲ್ಲಿ ಜಾಮೀನು ಹಾಗೂ ಬಿಡುಗಡೆಯಾಗಿರುತ್ತಾರೆ ಅಲ್ಲದೆ ಬಂದಿಗಳ ಅಕಾಲಿಕ ಬಿಡುಗಡೆಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಎಲ್ಲ ರೀತಿಯ ಸಹಕಾರ ನೀಡಿರುತ್ತಾರೆ. ಮುಂದಿನ ದಿನಗಳಲ್ಲಿ ನ್ಯಾಯಾಧೀಶರು ಪದೋನ್ನತಿ ಹೊಂದಿ ಬೆಳಗಾವಿಗೆ ಬರಲಿ ಎಂದು ಶುಭ ಹಾರೈಸಿದರು ಹಾಗೂ ಅವರು ನೀಡಿದ ಸಹಕಾರಕ್ಕೆ ಕಾರಾಗೃಹ ಇಲಾಖೆ ಸದಾಕಾಲ ಚಿರಋಣಿಯಾಗಿರುತ್ತದೆ ಎಂದು ಹೇಳಿದರು.
ನ್ಯಾಯಾಧೀಶ ಮುರಳಿ ಮೋಹನ ರೆಡ್ಡಿ ಮಾತನಾಡಿ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಎಲ್ಲಾ ಇಲಾಖೆಯವರು ಸಹಕಾರ ನೀಡಿರುತ್ತಾರೆ. ಅದರಲ್ಲಿ ಕಾರಾಗೃಹ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಸಹಕಾರ ತುಂಬಾ ಮುಖ್ಯವಾಗಿದ್ದು. ಕಾರಾಗೃಹದ ಬಡ ನಿವಾಸಿಗಳಿಗೆ ಕಾನೂನು ಸೇವೆಗಳ ಪ್ರಾಧೀಕಾರ ವತಿಯಿಂದ ಸಾಕ್ಷರತಾ ಕಾರ್ಯಕ್ರಮವನ್ನು ಹಾಗೂ ಉಚಿತ ಕಾನೂನು ನೆರವುಗಳನ್ನು ದೊರಕಿಸಿ ಕೊಡುವಲ್ಲಿ ಎಲ್ಲರು ಉತ್ತಮ ಕಾರ್ಯನಿರ್ವಹಿಸಿರುತ್ತಾರೆ. ಪ್ರತಿಯೊಬ್ಬ ಸರ್ಕಾರಿ ನೌಕರರ ಸೇವಾವಧಿಯಲ್ಲಿ ವರ್ಗಾವಣೆ ಸಾಮಾನ್ಯ ಕಳೆದ ಮೂರು ವರ್ಷಗಳ ಕಾಲ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ ಕ್ಷಣಗಳನ್ನು ಎಂದಿಗೂ ಮರಯಲಾರೆ ಎಂದು ಹೇಳಿದರು.
ವೈಧ್ಯಾಧಿಕಾರಿ ಡಾ. ಸಂಜಯ ಡುಮ್ಮಗೋಳ, ಡಾ. ಎಮ್ ಎಸ್ ಶಾಲದಾರ ಹಾಗೂ ಜೈಲರ್‌ಗಳಾದ ರಾಜೇಶ ಧರ್ಮಟ್ಟಿ, ಬಿ ವಾಯ್ ಭಜಂತ್ರಿ, ಎಪ್ ಟಿ ದಂಡೈಯನ್ನವರ ಹಾಗೂ ಆರ್ ಬಿ ಕಾಂಬಳೆ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕಾರಾಗೃಹದ ಉಪಾಧ್ಯಾಯ ಶಶಿಕಾಂತ ಯಾದಗೂಡೆ ಸ್ವಾಗತಿಸಿ ನಿರೂಪಿಸಿದರು.