ಲೋಕದರ್ಶನ ವರದಿ
ಕೊಪ್ಪಳ 13: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವರ್ತನೆ ಸರಿಯಾಗಿಲ್ಲ, ಹಗುರವಾದ ಮಾತನಾಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ವಾತಾವರಣ ನಮ್ಮ ಪರ ಇಲ್ಲ ಎಂದು ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕೊಪ್ಪಳದ ಬಳಿ ಬಸಾಪೂರು ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, 2014ಕ್ಕೆ ಹೋಲಿಕೆ ಮಾಡಿದರೆ ಬಿಜೆಪಿಗೆ ಈಗ ಒಳ್ಳೆಯ ವಾತಾವರಣವಿದೆ. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲ್ಲುವುದು ಖಚಿತವಾದ ನಂತರ ಕುಮಾರಸ್ವಾಮಿ ಮನಬಂದಂತೆ ಮಾತಾಡ್ತಿದ್ದಾರೆ ಎಂದರು.
ಕೇಂದ್ರದ ಪ್ರಧಾನ ಮಂತ್ರಿ ಮೋದಿ ಸಾಧನೆ, ರಾಜ್ಯದ ಸಮ್ಮೀಶ್ರ ಸರ್ಕಾರದ ವೈಫಲ್ಯ, ಹಿಂದಿನ ಬಿಜೆಪಿ ಸಕರ್ಾರದ ಸಾಧನೆ ನಮಗೆ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದ ಯಡಿಯೂರಪ್ಪ ಅವರು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಗೃಹ ಸಚಿವ ಎಂ.ಬಿ. ಪಾಟೀಲ್ರ ಲಿಂಗಾಯತರ ಪ್ರತ್ಯೇಕ ಧರ್ಮದ ಪರ-ವಿರೋಧ ಮಾತುಗಳು ಅವರಿಗೆ ಬಿಟ್ಟಿದ್ದು, ತಂತ್ರ ಕುತಂತ್ರದಿಂದ ಅವರು ಮಾತಾಡತೀದಾರೋ ಗೊತ್ತಿಲ್ಲ, ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಇದೇ ವೇಳೆ ಯಡಿಯೂರಪ್ಪ ಮಾತನಾಡಿದರು.
ಸುಮಲತಾ ಅವರನ್ನು 'ಮಾಯಾಂಗನೆ' ಎಂಬ ಮಂಡ್ಯದ ಸಂಸದ ಶಿವರಾಮೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸೋಲುವ ಭೀತಿಯಿಂದ ಹೀಗೆಲ್ಲ ಮಾತಾಡ್ತಿದ್ದಾರೆ. ಸಂಸದ ಶಿವರಾಮೇಗೌಡ ಹಗುರವಾಗಿ ಮಾತಾಡೊಕ್ಕೆ ಹೆಸರಾಗಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಗೆಲುವು ಖಚಿತವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭೆ ಬಿಜೆಪಿ ಅಭ್ಯಥರ್ಿ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ್ ದಡೇಸೂಗೂರು, ಬಿಜೆಪಿ ಮುಖಂಡರಾದ ಅಂದಾನಪ್ಪ ಅಗಡಿ,ಅಮರೇಶ ಕರಡಿ, ಚಂದ್ರಶೇಖರಗೌಡ ಹಲಿಗೇರಿ, ಗವಿಸಿದ್ದಪ್ಪ ಕರಡಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.