ಕೊಪ್ಪಳ ನಗರ ಸಭೆ ಬಜೆಟ್ ನಲ್ಲಿ ಮುಖ್ಯ ಬೇಡಿಕೆಗಳ ಈಡೇರಿಕೆಗೆ ಜನಾಗ್ರಹ ಮನವಿ

Koppal City Council appeals for fulfillment of key demands in budget

ಕೊಪ್ಪಳ ನಗರ ಸಭೆ ಬಜೆಟ್ ನಲ್ಲಿ ಮುಖ್ಯ ಬೇಡಿಕೆಗಳ ಈಡೇರಿಕೆಗೆ ಜನಾಗ್ರಹ ಮನವಿ 

   ಕೊಪ್ಪಳ  29: ನಗರ ಸಭೆ ಬಜೆಟ್ ನಲ್ಲಿ ಮುಖ್ಯ ಬೇಡಿಕೆಗಳ ಈಡೇರಿಕೆಗೆ ಜನಪರ ಸಂಘಟನೆಗಳ ಒಕ್ಕೂಟದಿಂದ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರಿಗೆ ಮಂಗಳವಾರ ಬಜೆಟ್ ಮಂಡನೆ ಪೂರ್ವ ಜನಾಗ್ರಹ ಮನವಿ ಸಲ್ಲಿಸಲಾಯಿತು.            ಮನವಿಯಲ್ಲಿ ಕೊಪ್ಪಳ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ವಿಳಂಬವಾಗುತ್ತಿದ್ದು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಒಂದರ್ಧ ಭಾಗದಲ್ಲಿ ಬರುವುದರಿಂದ ಉಳಿದ ಅರ್ಧ ಭಾಗ ಮಾತ್ರ ಅಂದರೆ ದದೆಗಲ್ ಬಳಿಯಿಂದ ಭಾಗ್ಯನಗರದ ಹೊರ ವಲಯದಿಂದ ಕಿನ್ನಾಳ, ಕುಷ್ಟಗಿ ರಸ್ತೆ ಒಳಗೊಂಡು ಕಿಡದಾಳ ಬಳಿಯಿಂದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವರೆಗೆ ಹೊಸ ಅರ್ಧ ವರ್ತುಲ ರಸ್ತೆ ನಿರ್ಮಿಸಬೇಕು.   

       ಈಗಾಗಲೇ ಬೇಸಿಗೆ ಮಳೆ ಪ್ರಾರಂಭವಾಗಿದ್ದು, ರಾಜ್ ಕಾಲುವೆಯು ಬಿ.ಎಸ್‌.ಗುಡಿ ಅಂಗಡಿಯಿಂದ ಡಾ: ಟಿ.ಹೆಚ್‌.ಮುಲ್ಲಾ ಆಸ್ಪತ್ರೆ ವರೆಗೂ ಅಲ್ಲಲ್ಲಿ ಗಿಡಗಳು ಬೆಳೆದಿದೆ,ನಗರ ಪೊಲೀಸ್ ಠಾಣೆ ಎದುರಿನ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಸಾರ್ವಜನಿಕ ಶೌಚಾಲಯದ ಹತ್ತಿರ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳ ಕಣ್ಣಿಗೆ ರಾಚುವಂತೆ ವಿಪರೀತ ಗಿಡಗಳು ಹುಲುಸಾಗಿ ಬೆಳೆದು ನಿಂತಿವೆ, ಠಾಣೆ ಆವರಣ ಗೋಡೆ ಹತ್ತಿಕೊಂಡು ರಾಷ್ಟ್ರೀಯ ಹೆದ್ದಾರಿ ತನಕ ವಿವಿಧ ಗಿಡಗಳು ಹಣ್ಣು ಬಿಟ್ಟಷ್ಟು ಬೆಳೆದರೂ ನೋಡಿಯೂ ನೋಡದಂತೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ, ಒಂದೂವರೆ ತಾಸು ಮಳೆ ಬಂದರೆ ರಾಜ್ ಕಾಲುವೆ ತುಂಬಿ ರಸ್ತೆ, ಪಕ್ಕದ ಬಡಾವಣೆಗಳ ಮನೆಗಳಿಗೆ ಹೊಲಸು ನೀರು ನುಗುತ್ತದೆ,ತಕ್ಷಣ ಚರಂಡಿಯಲ್ಲಿರುವ ಎಲ್ಲಾ ಗಿಡಗಳನ್ನು ತೆಗೆಸಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿ, ರಾಜ್ ಕಾಲುವೆ ತುಂಡು ತುಂಡು ಕಳಪೆ ಕಾಮಗಾರಿ ಮಾಡುವುದನ್ನು ನಿಲ್ಲಿಸಿ, ಇಡೀ ರಾಜ್ ಕಾಲುವೆ ಆಧುನಿಕ ಮಾದರಿಯಲ್ಲಿ ನೀರು ಹರಿಯುವಂತೆ ವೈಜ್ಞಾನಿಕವಾಗಿ ನವೀಕರಣ ಕಾಮಗಾರಿ ಕೈಗೊಳ್ಳಬೇಕು.      ನಗರದಲ್ಲಿ ಹದಗೆಟ್ಟಿರುವ ಬಹುತೇಕ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಒತ್ತಾಯಿಸಿ ಈಗಾಗಲೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ,ತೀವ್ರದಲ್ಲಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ಸಮೀಕ್ಷೆ ನಡೆಸಿ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ನಡೆಸಿ,ಅವೈಜ್ಞಾನಿಕ ವೇಗ ನಿಯಂತ್ರಕ (ಸ್ಪೀಡ್ ಬ್ರೇಕರ್) ಗಳನ್ನು ತೆಗೆಸಿ ಉಚ್ಚ ನ್ಯಾಯಾಲಯದ ಆಶಯದಂತೆ ಕೇವಲ ಆರು ಇಂಚಿಗೂ ಕಡಿಮೆ ಎತ್ತರದ ವೇಗ ನಿಯಂತ್ರಕಗಳನ್ನು ನಿರ್ಮಿಸಬೇಕು.         

      ಪ್ರಾಥಮಿಕ ಶಿಕ್ಷಣ.ಪ್ರೌಢ ಶಿಕ್ಷಣ. ಉನ್ನತ ಶಿಕ್ಷಣ: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಒಳಗೊಂಡ ವಿವಿಧ ವಿಷಯಗಳಲ್ಲಿ ಉನ್ನತ ಮಟ್ಟದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವ ಶಿಕ್ಷಣ,ವೃತ್ತಿಪರ ಶಿಕ್ಷಣ: ನಿರ್ದಿಷ್ಟ ವೃತ್ತಿಗಳಿಗೆ ಅಗತ್ಯವಾದ ಕೌಶಲ್ಯಗಳನ್ನು,ಬಹು ಬೇಡಿಕೆಯ ತಂತ್ರಜ್ಞಾನದ ಶಿಕ್ಷಣ.ಆನ್‌ಲೈನ್ ಕಲಿಕೆ, ಡಿಜಿಟಲ್ ಸಂಪನ್ಮೂಲಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ವಿಧಾನಗಳ ಶಿಕ್ಷಣವನ್ನು ಒಂದೇ ಕಡೆ ಎಲ್ಲ ರೀತಿಯ ಶಿಕ್ಷಣ ಸಿಗುವಂತೆ ಯೋಜನೆ ರೂಪಿಸಿ ಶೈಕ್ಷಣಿಕ ವಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.      ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಅಗತ್ಯ ಕ್ರಮ ವಹಿಸಲು ಅನೇಕ ಬಾರಿ ಮನವಿಗಳನ್ನು ಕೊಟ್ಟರೂ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ಮೊದಲು ನಿಮ್ಮ ನಗರಸಭೆಯ ಸಭೆಗಳಲ್ಲಿ ಪ್ಲಾಸ್ಟಿಕ್, ರಟ್ಟಿನ ಚಹಾ ಕಪ್ ಗಳು, ಗ್ಲಾಸ್ ಗಳನ್ನು ಬಳಸುವುದನ್ನು ನಿಷೇಧಿಸಬೇಕು,ನಗರದ ಮಾರುಕಟ್ಟೆಗಳಲ್ಲಿ ನಿರ್ಭಯವಾಗಿ ಎಲ್ಲೆಂದರಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಪೂರ್ಣ ಅವಕಾಶ ಕಲ್ಪಿಸಿದ್ದಾರೆ ಅಥವಾ ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಂಡಿದ್ದಾರೆಯೇ ? ತಿಳಿಯದು,ತಕ್ಷಣ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟದ ಏಜೆನ್ಸಿಗಳ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಜರುಗಿಸಬೇಕು.    

      ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾ ಆಡಳಿತ ಭವನದವರೆಗೂ ಎರಡೂ ಬದಿಗಳಲ್ಲಿ ಎಲ್ಲಿಯೂ ಸಾರ್ವಜನಿಕ ಮೂತ್ರಲಯ ಮತ್ತು ಶೌಚಾಲಯಗಳಿಲ್ಲ, ತಕ್ಷಣಕ್ಕೆ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಲಭ್ಯ ಇರುವ ಯೋಗ್ಯ ಜಾಗೆಯಲ್ಲಿ ಸಾರ್ವಜನಿಕ ಮೂತ್ರಲಯ ಮತ್ತು ಶೌಚಾಲಯ ನಿರ್ಮಿಸಬೇಕು. ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲೂ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಬೇಕು.      ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳ ಮುಂದೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ, ನಗರ ಸಭೆ ಸೇರಿದಂತೆ ಅನೇಕ ಸರ್ಕಾರಿ ಕಛೇರಿಗಳ ಮುಂಭಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಲ್ಲ, ಎಲ್ಲಾ ಅಂಗಡಿಗಳ ಕಛೇರಿಗಳ ಮುಂದೆ ವಾಹನಗಳ ನಿಲುಗಡೆಗೆ ವ್ಯವಸ್ಥಿತ ಅವಕಾಶ ಮಾಡಿಕೊಡಬೇಕು.      ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ನಿತ್ಯ ಇಪ್ಪತ್ತು ನಾಲ್ಕು ತಾಸೂ ಕುಡಿಯುವ ನೀರು ಪೂರೈಕೆ ಯೋಜನೆ ಕುಂಟುತ್ತ ಸಾಗುತ್ತಿದ್ದು, ಕಾಮಗಾರಿ ತ್ವರಿತವಾಗಿ ನಡೆಯಲು ಕ್ರಮ ಕೈಗೊಳ್ಳಬೇಕು,     ಕೂಗು ಅಳತೆಯಲ್ಲಿರುವ ಭಾಗ್ಯನಗರವನ್ನು ಕೊಪ್ಪಳ ನಗರಸಭೆ ವ್ಯಾಪ್ತಿಗೆ ಸೇರಿಸಬೇಕು, ಸರ್ಕಾರದ ಆದೇಶದಂತೆ ಕೊಪ್ಪಳ ನಗರಸಭೆ ವ್ಯಾಪ್ತಿಯನ್ನು ಸುತ್ತಲಿನ ಹಳ್ಳಿಗಳ ಒಳಗೊಂಡು ಗುರುತಿಸಿ ಫಲಕಗಳನ್ನು ಅಳವಡಿಸಬೇಕು.     ನಗರದ ಎಲ್ಲಾ ರಸ್ತೆಗಳಿಗೂ ಎರಡೂ ಬದಿಗಳಲ್ಲಿ ನಗರದ ಹಸಿರಿಕರಣಕ್ಕೆ ಹಾಕಿದ ಗಿಡಗಳು ಬೆಳೆದು ವಿದ್ಯುತ್ ಕಂಬಗಳ ತಂತಿಗಳಿಗೆ ತಾಗುತ್ತಿದ್ದರಿಂದ ಕಡಿಯಲಾಗುತ್ತಿದೆ.ನಗರ ಸಭೆಯಿಂದ ಎಲ್ಲ ರಸ್ತೆಗಳ ಎರಡೂ ಬದಿಗಳ ಭೂಮಿಯಲ್ಲಿ ಭೂಗತ (ಅಂಡರ್ ಗ್ರೌಂಡ್) ವಿದ್ಯುತ್ ತಂತಿಗಳನ್ನು ಅಳವಡಿಸಲು ಯೋಜನೆ ರೂಪಿಸಿ ಜಾರಿಗೆ ತರಲು ಜನಾಗ್ರಹ ಮೂಲಕ ಒತ್ತಾಯಿಸುತ್ತೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ.ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್, ಯುವ ವಕೀಲ ಮಹಾಂತೇಶ ಜಿ, ಚಾಕ್ರಿ, ರೈಲ್ವೆ ಜನಪರ ಹೋರಾಟ ಸಮಿತಿಯ ಕಾರ್ಯದರ್ಶಿ ಮಖಬೂಲ್ ರಾಯಚೂರು, ಮುತ್ತು ಹಡಪದ್ ಮುಂತಾದವರು ಉಪಸ್ಥಿತರಿದ್ದರು.