ಹಳಗನ್ನಡ ಕಾವ್ಯಗಳು ತಂತ್ರಜ್ಞಾನದ ಭಾಗವಾಗಲಿ: ಡಾ.ಸಂಗಮೇಶ ಕಲ್ಯಾಣಿ

Let old Kannada poems become a part of technology: Dr. Sangamesh Kalyani

ಮುಧೋಳ 22: ಇಂದಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಹೊಸಗನ್ನಡ ಸಾಹಿತ್ಯಕ್ಕೆ ಜೋತುಬಿದ್ದು ಆಧುನಿಕ ಸಾಹಿತ್ಯದ ಅಧ್ಯಯನದಿಂದ ಹಳೆಗನ್ನಡ ಸಾಹಿತ್ಯವನ್ನು ದೂರುಮಾಡಿದ್ದು ದುರಂತದ ಸಂಗತಿ ಯಾಗಿದೆ ಎಂದು ಖ್ಯಾತ ಸಂಶೋಧಕ, ಮೋಡಿಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿ ಹೇಳಿದರು. 

ನಗರದ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ವತಿಯಿಂದ ಗುರುವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಹಳಗನ್ನಡ ಸಾಹಿತ್ಯಾವಲೋಕನ 5 ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳಗನ್ನಡ ಕಾವ್ಯ ಗಳು ತಂತ್ರಜ್ಞಾನದ ಭಾಗವಾಗಬೇಕು, ವಿದ್ಯಾರ್ಥಿಗಳು ದಿನನಿತ್ಯ ಹಳಗನ್ನಡ ಭಾಷೆಯನ್ನು ಸರಾಗ ವಾಗಿ ಓದುವ, ರಸಗ್ರಹಣ ಮಾಡಿಕೊಳ್ಳುವ ಸ್ವರೂಪವನ್ನು ಕಂಡುಕೊಳ್ಳಬೇಕಿದೆ ಎಂದರು. 

 ಇತ್ತೀಚಿಗೆ ಕೆಲವು ವಿಶ್ಯವಿದ್ಯಾಲಯಗಳು ರೂಪಿಸುವ ಪಠ್ಯಕ್ರಮದಲ್ಲಿ ಹಳಗನ್ನಡ ಸಾಹಿತ್ಯವನ್ನು ಸೇರಿಸದೇ ಇರುವುದು ದುರದೃಷ್ಟಕರ. ಇದಕ್ಕೆ ಪಠ್ಯಪುಸ್ತಕ ಮಂಡಳಿಯವರು ಹಳಗನ್ನಡ ಸಾಹಿತ್ಯ ಪರಿಚಯ ವಿರದಿರುವುದು, ಅಲ್ಲದೇ ಕೆಲವು ಕನ್ನಡ ವಿಷಯ ಬೋಧಕರು ಹಳಗನ್ನಡ ಪಠ್ಯ ಬೋಧನೆ ಕಠಿಣ ವೆಂದು ತಿಳಿದುಕೊಂಡಿರುವ ಕಾರಣವೂ ಇರಬಹುದೆಂದ ಅವರು ಈ ಕಾರಣವನ್ನು ಮಕ್ಕಳ ಮೇಲೆ ಹೇರಿ ನುಣುಚಿಕೊಳ್ಳುವಿಕೆಯ ಕಾರ್ಯ ನಡೆಯುತ್ತಿದೆ, ಹಳಗನ್ನಡ ಸಾಹಿತ್ಯವನ್ನು ಪ್ರಸ್ತುತ ಗೊಳಿಸುವ ಜವಾಬ್ದಾರಿ ಹೊತ್ತವರೇ ಈ ರೀತಿ ಅವಜ್ಞೆಗೆ ಒಳಗಾಗುತ್ತಾರೆ. ಇಂದು ಆಧುನಿಕ ಜಗತ್ತು ಅನುಭವಿಸುವ ವ್ಯಾಕುಲತೆಗೆ ಹಳಗನ್ನಡ ಸಾಹಿತ್ಯವನ್ನು ಮಲಾಮು ರೀತಿ ಬಳಸಬಹುದಾದ ಅನಿವಾರ್ಯತೆಯ ಸ್ರೃಷ್ಠಿಯಾಗುತ್ತಿದೆ. ರನ್ನನ ಗದಾಯುದ್ಧದ ವೈಶಂಪಾಯನ ಸರೋವರದ ಪ್ರಸಂಗವನ್ನು ವಿವರಿಸುತ್ತಾ ವಿದ್ಯಾರ್ಥಿಗಳಿಗೆ ಹಳಗನ್ನಡ ಸಾಹಿತ್ಯದ ರಸದೌತನ ಉಣಬಡಿಸಿದರು.  

ಎರಡನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಮುಧೋಳ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ರೇಖಾಮನಿ ಸಿ.ಎಂ ಮಾತನಾಡಿ ಭರತ ಬಾಹುಬಲಿ ಯುದ್ಧದ ಪ್ರಸಂಗವನ್ನು ಉದಾಹರಣೆ ಸಮೇತ ವಿವರಿಸಿದರು. 

ಪ್ರಾಚಾರ್ಯ ಪ್ರೊ.ಎಮ್‌.ವ್ಹಿ.ಜಿಗಬಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿ ಹಳಗನ್ನಡ ಸಾಹಿತ್ಯದ ಶ್ರೀಮಂತಿಕೆಯಿಂದಾಗಿ ಕರ್ನಾಟಕ ಇಂದು ಅಂತರಾಷ್ಟ್ರೀಯ ಮಟ್ಟದ ಕೀರ್ತಿಹೊಂದಲು ಕಾರಣವಾಗಿದೆ ಅದಕ್ಕೆ ಪಂಪ-ರನ್ನರನ್ನು ಉದಾಹರಿಸುತ್ತಾ ಮಾತನಾಡಿದ ಅವರು ಇದೇ ವೇಳೆ ಕನ್ನಡಕ್ಕೆ ಮೊದಲ ಅಂತರಾಷ್ಟ್ರಮಟ್ಟದ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿದರು. 

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರಹ್ಲಾದ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಐಕ್ಯೂಎಸಿ ಸಂಯೋಜಕ ಪ್ರೊ.ಎ.ಆರ್‌.ಕಡೂರ, ಕನ್ನಡ ಉಪನ್ಯಾಸಕಿ ಪ್ರೊ.ಎಲ್‌.ಎಮ್‌. ಕಲ್ಯಾಣಶೆಟ್ಟಿ ವೇದಿಕೆ ಮೇಲಿದ್ದರು, ಕನ್ನಡ ಸಂಘದ ಸಂಚಾಲಕ ಪ್ರೊ.ವೀರಣ್ಣ ಕಿತ್ತೂರ ಸ್ವಾಗತಿಸಿದರು, ವಿದ್ಯಾರ್ಥಿನಿಯ ರಾದ ಶಾಂತಾ ಗಾಣಿಗೇರ, ಸವಿತಾ ಲಕ್ಕಪ್ಪಗೋಳ ಪ್ರಾರ್ಥನೆ ಹೇಳಿದರು, ಉಷಾ ಬೆಳಗಲಿ ನಿರೂಪಿಸಿದರು, ಐಶ್ವರ್ಯ ಬಂಡಿವಡ್ಡರ ವಂದಿಸಿದರು.