ಬಳ್ಳಾರಿ 22: ನಿರ್ಲಕ್ಷಿಸಿದರೆ ಅಪಾಯಕಾರಿಯಾಗುವ ದಡಾರ ರೋಗ ತಡೆಯಲು ಮಗುವಿನ ವಯಸ್ಸು ಒಂಬತ್ತು ತಿಂಗಳು ತುಂಬಿದ ನಂತರ ತಪ್ಪದೇ ದಡಾರ-ರೂಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ಕಲಬುರಗಿ ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವೈದ್ಯಾಧಿಕಾರಿಗಳ ಜಾಗೃತಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರುಸಾಲೆಯಿಂದ ದೇಹದ ಮೇಲೆ ನುಚ್ಚು ಗುಳ್ಳೆಗಳು ಕಂಡು ಬರುವುದು ಸಹಜ. ದಡಾರ ಸೋಂಕು ಸಹ ನೋಡಲು ಇದೇ ರೀತಿ ಕಂಡು ಬರುತ್ತದೆ. ಮುಂಜಾಗೃತೆ ಕ್ರಮವಾಗಿ ಯಾವುದೇ ತಪ್ಪು ನಂಬಿಕೆಗಳನ್ನು ನಂಬದೆ ಮಕ್ಕಳಿಗೆ ದಡಾರ- ರೂಬೆಲ್ಲಾ ಲಸಿಕೆ ಹಾಕಿಸಬೇಕು ಎಂದರು.
ಮೇ 26 ರಿಂದ ಒಂದು ವಾರ ಜರಗುವ ವಿಶೇಷ ಲಸಿಕಾ ಕಾರ್ಯಕ್ರಮದಲ್ಲಿ ದಡಾರ ಪ್ರಕರಣಗಳು ಈ ಪೂರ್ವದಲ್ಲಿ ವರದಿಯಾದ ಗ್ರಾಮ, ಬಡಾವಣೆಗಳನ್ನು ಗುರಿಯಾಗಿಟ್ಟುಕೊಂಡು ಸಮುದಾಯದಲ್ಲಿ ಅಮ್ಮ, ತಟ್ಟು, ಗಂಜೀನಿ ಎಂದು ಕರೆಯಲ್ಪಡುವ ದಡಾರ ರೋಗ ಕುರಿತು ಜಾಗೃತಿ ನೀಡಬೇಕು ಎಂದರು.
ಪಾಲಕರು ಸಹ ತಮ್ಮ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಹಾಗೂ ಒಂದುವರೆ ವರ್ಷದ ಅವಧಿಯಲ್ಲಿ ತಪ್ಪದೆ ದಡಾರ ಲಸಿಕೆ ಹಾಕಿಸಲು ಮುಂದಾಗಬೇಕು. ಈ ಕುರಿತು ವ್ಯಾಪಕ ಜಾಗೃತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಮಾತನಾಡಿ, ದಡಾರ ವೈರಸ್ ಹೊಂದಿದ ಮಗುವಿನ ಸಂಪರ್ಕಕ್ಕೆ ಬರುವ ಇನ್ನೊಂದು ಮಗುವಿಗೆ ಬರುವ ಸಾಧ್ಯತೆ ಹೆಚ್ಚು ಇದ್ದು, ಕೆಮ್ಮು ಮತ್ತು ಸೀನುವಿಕೆಯಿಂದ ಇನ್ನೊಬ್ಬರಿಗೆ ಹರಡುತ್ತದೆ. ದಡಾರ ಸೋಂಕಿತ ವ್ಯಕ್ತಿಗೆ ಒಡ್ಡಿಕೊಂಡ ಸುಮಾರು 10 ದಿನಗಳ ನಂತರ ದಡಾರದ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದರು.
ದಡಾರದ ಅತ್ಯಂತ ಪ್ರಮುಖ ಲಕ್ಷಣವೆಂದರೆ ಕೆಂಪು ಬಣ್ಣದ ದದ್ದು(ಗುಳ್ಳೆ). ಆದರೆ ಇದು ಸಾಮಾನ್ಯವಾಗಿ ಮೊದಲ ಲಕ್ಷಣವಲ್ಲ, ಬದಲಾಗಿ ದಡಾರವು ಸಾಮಾನ್ಯವಾಗಿ ಜ್ವರ ತರಹದ ಕಾಯಿಲೆಯಾಗಿ ಪ್ರಾರಂಭವಾಗುತ್ತದೆ. 2 ರಿಂದ 4 ದಿನಗಳವರೆಗೆ ಇರುತ್ತದೆ. ಜ್ವರ, ಆಯಾಸ, ತೀವ್ರ ಕೆಮ್ಮು, ಕಾಂಜಂಕ್ಟಿವಿಟಿಸ್ (ಕೆಂಪು ಕಣ್ಣುಗಳು), ಸ್ರವಿಸುವ ಮೂಗು, ಬಾಯಿಯಲ್ಲಿ ಬಿಳಿ ಚುಕ್ಕೆಗಳು (ಕೊಪ್ಲಿಕ್ ಚುಕ್ಕೆಗಳು ಎಂದು ಕರೆಯಲಾಗುತ್ತದೆ. ಅನಾರೋಗ್ಯದ 3 ರಿಂದ 7 ದಿನಗಳಲ್ಲಿ ದದ್ದು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಕೆಂಪು ಮತ್ತು ಮಚ್ಚೆಯಿಂದ ಕೂಡಿರುತ್ತದೆ, ಆದರೆ ತುರಿಕೆ ಇರುವುದಿಲ್ಲ.
ದಡಾರದ ದದ್ದು ಸಾಮಾನ್ಯವಾಗಿ ತಲೆಯ ಮೇಲೆ ಪ್ರಾರಂಭವಾಗುತ್ತದೆ ಮತ್ತು ನಂತರ ದೇಹದ ಉಳಿದ ಭಾಗಗಳಿಗೆ ಹರಡುತ್ತದೆ. ಇದು ಸಾಮಾನ್ಯವಾಗಿ 4 ರಿಂದ 7 ದಿನಗಳವರೆಗೆ ಇರುತ್ತದೆ. ಒಂದು ವೇಳೆ ನಿರ್ಲಕ್ಷಿಸಿದರೆ ವಾಂತಿ-ಭೇದಿ, ನ್ಯೂಮೋನಿಯಾ ಉಂಟಾಗಿ ಮಗು ಮರಣ ಸಹ ಹೊಂದಬಹುದು, ಈ ಹಿನ್ನಲೆ ಪ್ರಸ್ತುತ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹೆಚ್ಚುವರಿಯಾಗಿ ಒಂದು ಡೊಸ್ ಲಸಿಕೆ ಹಾಗೂ ಇದರೊಂದಿಗೆ ವಿಟಾಮಿನ್-ಎ ಅನ್ನಾಂಗ ದ್ರಾವಣವನ್ನು ಸಹ ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಪ್ರದೇಶದ ಕೊಳಚೆ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶ, ವಲಸೆ ಸ್ಥಳಗಳಲ್ಲಿ ಹೆಚ್ಚು ಜಾಗೃತಿ ನೀಡಿ ಲಸಿಕೆ ಹಾಕಿಸಲು ಸೂಚಿಸಿದರು.
ಇದೇ ವೇಳೆ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ಸುಧೀರ್ಘ ಚರ್ಚಿಸಿದರು.
ಸಭೆಯಲ್ಲಿ ಡಬ್ಲ್ಯೂಹೆಚ್‌ಓ ಸರ್ವೆಕ್ಷಣಾ ವೈದ್ಯಾಧಿಕಾರಿ ಡಾ.ಆರ್.ಎಸ್ ಶ್ರೀಧರ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.