ನವದೆಹಲಿ, ಮಾ 20: ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಹುಕೋಟಿ ವಂಚನೆ ಪ್ರಕರಣದ ರೂವಾರಿ ನೀರವ್ ಮೋದಿ ಬಂಧನವನ್ನು ಕಾಂಗ್ರೆಸ್ ಟೀಕಿಸಿದೆ.
ಈ ಮೊದಲು ಆತನ ಪರಾರಿಗೆ ಅವಕಾಶ ಕಲ್ಪಿಸಿದ್ದ ಬಿಜೆಪಿ ನೇತೃತ್ವದ ಸರ್ಕಾರ, ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಬುಧವಾರ ಹೇಳಿದ್ದಾರೆ.
“ಆತ ವಿದೇಶಕ್ಕೆ ಪರಾರಿಯಾಗಲು ಸಹಕರಿಸಿದ್ದು ಬಿಜೆಪಿ. ಇದೀಗ ಆತನನ್ನು ಹಿಂದಕ್ಕೆ ಕರೆಸಿಕೊಂಡಿರುವುದೂ ಬಿಜೆಪಿ. ಚುನಾವಣಾ ದೃಷ್ಟಿಯಿಂದ ಹಿಂದಕ್ಕೆ ಕರೆಸಿಕೊಂಡಿದ್ದು, ಮುಗಿದ ಬಳಿಕ ಮತ್ತೆ ಕಳುಹಿಸುತ್ತಾರೆ” ಎಂದು ಗುಲಾಂ ನಬಿ ಆಜಾದ್ ವ್ಯಂಗ್ಯವಾಡಿದ್ದಾರೆ.
ವಜ್ರೋದ್ಯಮಿ, 48 ವರ್ಷ ವಯಸ್ಸಿನ ನೀರವ್ ಮೋದಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮುಂಬೈ ಶಾಖೆಯಲ್ಲಿ 14 ಸಾವಿರ ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ ನೀರವ್ ಮೋದಿಯ ಅಗತ್ಯವಿದೆ.
ಮಧ್ಯ ಲಂಡನ್ ನ ಹೋಲ್ ಬೋರ್ನ್ ವಲಯದಲ್ಲಿ ಮಂಗಳವಾರ ನೀರವ್ ಮೋದಿಯನ್ನು ಬಂಧಿಸಲಾಗಿದೆ. ಅವರನ್ನು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ನಿರೀಕ್ಷೆಯಿದೆ. ನ್ಯಾಯಾಲಯವು ಸೋಮವಾರ ಬಂಧನದ ವಾರೆಂಟ್ ಜಾರಿಗೊಳಿಸಿತ್ತು.