ಶಾಲಾ ಪ್ರಾರಂಭೋತ್ಸವ ದಿನ ಪಠ್ಯಪುಸ್ತಕ ವಿತರಣೆಗೆ ಸೂಚನೆ
ಬೆಳಗಾವಿ 24: ಸರಕಾರದಿಂದ ಸರಬರಾಜು ಮಾಡಲಾಗಿರುವ ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಮೇ 29 ರಂದು ನಡೆಯಲಿರುವ ಶಾಲಾ ಪ್ರಾರಂಭೋತ್ಸವದ ದಿನ ವಿತರಣೆ ಮಾಡಬೇಕು. ಪ್ರತಿ ನಾಲ್ಕನೇ ಶನಿವಾರ ಕಡ್ಡಾಯವಾಗಿ ಪಾಲಕರ ಸಭೆಯನ್ನು ನಡೆಸಿ ಅವರ ಸಹಕಾರದಿಂದ ಮಕ್ಕಳ ದಾಖಲಾತಿ, ಹಾಜರಾತಿಯನ್ನು ಕಲಿಕೆಗೆ ಸಮನ್ವಯ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ(ಮೇ 23) ಜರುಗಿದ "ನಮ್ಮ ಶಾಲೆ-ನಮ್ಮ ಜವಾಬ್ದಾರಿ" ಶಾಲಾ ಪ್ರಾರಂಭೋತ್ಸವ ಹಾಗೂ 2025-26 ನೇ ಸಾಲಿನ ಶೈಕ್ಷಣಿಕ ಗುಣಮಟ್ಟದ ಪ್ರಗತಿಗಾಗಿ ಶಿಕ್ಷಣ ಇಲಾಖೆಯ ಮೇಲುಸ್ತರುವಾರಿ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುಣಾತ್ಮಕ ಶಿಕ್ಷಣಕ್ಕಾಗಿ 1 ರಿಂದ 10ನೇ ತರಗತಿಯವರೆಗೆ ನಿರ್ದಿಷ್ಟ ಮತ್ತು ವಿಶಿಷ್ಟ ಯೋಜನೆಯನ್ನು ರೂಪಿಸಬೇಕು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ವಿಶೇಷ ಚಟುವಟಿಕೆ ರೂಪಿಸಿ 5 ಹಾಗೂ 8 ತರಗತಿಯ ಮಕ್ಕಳಿಗೆ ಗ್ರಾಮ ಪಂಚಾಯತಿ ಹಂತದಲ್ಲಿನ ಗ್ರಂಥಾಲಯಗಳ ಬಳಕೆ ಮೂಲಕ ಶಿಕ್ಷಣದ ಗುಣಮಟ್ಟ ತಿಳಿಯಲು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಧಿಕಾರಿಗಳ ಶಾಲಾ ಭೇಟಿ ಕಡ್ಡಾಯ: ನಾನು ಸಹ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತೇನೆ. ಅದೇ ರೀತಿ ಎಲ್ಲ ಅಧಿಕಾರಿಗಳೂ ಶಾಲಾ ಭೇಟಿ ಕಡ್ಡಾಯವಾಗಿ ಮಾಡಬೇಕು. ಎಲ್ಲ ಅಧಿಕಾರಿಗಳು ದತ್ತು ಶಾಲೆಗೆ ತೆರಳಿ ಪಾಠ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.
ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಯ, ವಿಷಯ ಪರೀವೀಕ್ಷಕರು, ಸಿ.ಆರಿ್ಪ., ಬಿ.ಆರಿ್ಪ., ಡಯಟ್ ಉಪನ್ಯಾಸಕರೂ ಸೇರಿದಂತೆ ಎಲ್ಲ ಅಧಿಕಾರಿಗಳು ಶಾಲಾ ಭೇಟಿಗಳ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕ್ರೀಡೆಗಳಿಗೆ ವಿಶೇಷ ಆದ್ಯತೆ ನೀಡಬೇಕು. ದೈಹಿಕ ಶಿಕ್ಷಕರು ಲಭ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಬಳಕೆ ಮಾಡುಕೊಂಡು ಮಕ್ಕಳಿಗೆ ಕಡ್ಡಾಯವಾಗಿ ತರಬೇತಿಯನ್ನು ನೀಡಬೇಕು. ಶಾಲೆಯಲ್ಲಿರುವ ಕಂಪ್ಯೂಟರ್, ಕ್ರೀಡಾ ಸಾಮಗ್ರಿ ಮತ್ತು ವಿಜ್ಞಾನ ಉಪಕರಣಗಳನ್ನು ಕಡ್ಡಾಯವಾಗಿ ಬಳಕೆ ಮಾಡಿಕೊಂಡು ಗುಣಾತ್ಮಕ ಶಿಕ್ಷಣ ನೀಡಬೇಕು. ಇಲಾಖೆಯ ಸೂಚನೆಗಳು ಮತ್ತು ಅವಶ್ಯಕತೆಯನ್ನು ಅರಿತುಕೊಂಡು ಪ್ರತಿ ಮಗುವಿಗರ ಮಧ್ಯಾಹ್ನ ಉಪಾಹಾರ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.
ಬೆಂಚ್ ಅಭಿಯಾನದ ಮೂಲಕ ಸರಕಾರಕ್ಕೆ ಅಂದಾಜು ಐದು ಕೋಟಿ ರೂಪಾಯಿ ಅನುದಾನ ಉಳಿತಾಯ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಜಿಲ್ಲೆಯಲ್ಲಿ ಅತ್ಯಂತ ಶಿಸ್ತಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿರುವುದಕ್ಕೆ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲ ಶೈಕ್ಷಣಿಕ ಮೇಲುಸ್ತುವಾರಿ ಅಧಿಕಾರಿಗಳಿಗೆ ನಲಿಕಲಿ, 4 ರಿಂದ 7 ರವರೆಗಿನ ವಿದ್ಯಾರ್ಥಿಗಳಿಗೆ ಹಾಗೂ 8,9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಪರಿಚಯಿಸಲಾಯಿತು. ಇದಲ್ಲದೇ ಮುಂಬರುವ ದಿನಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನ, ದಾಖಲಾತಿ, ಹಾಜರಾತಿ, ಮೂಲ ಸೌಕರ್ಯಗಳ ಒದಗಿಸುವಿಕೆ, ಇನ್ ಸ್ಪೈರ್ ಅವಾರ್ಡ, ಕಂಪ್ಯೂಟರ್ ಶಿಕ್ಷಣದ ಪರಿಚಯಾತ್ಮಕ ವಿವರಣೆ ನೀಡಲಾಯಿತು. ಕ್ರೀಡಾ ಸಾಮಗ್ರಿಗಳ ಸದ್ಬಳಕೆಯ ಕ್ರಿಯಾಯೋಜನೆ ಕೂಡ ಒದಗಿಸಲಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ(ದ) ಉಪ ನಿರ್ದೇಶಕರಾದ ಶ್ರೀಮತಿ ಎಲ್.ಎಸ್.ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಗಂಗಾಧರ್ ದಿವಟರ ಮತ್ತಿತರರು ಉಪಸ್ಥಿತರಿದ್ದರು. ಚಿಕ್ಕೋಡಿ ಉಪ ನಿರ್ದೇಶಕ ಸೀತಾರಾಮು ಆರ್.ಎಸ್.. ವಂದಿಸಿದರು.