ತುಂಗಭದ್ರಾ ನದಿಯಲ್ಲಿ ನೀರುನಾಯಿಗಳ ಪುಳಕ : ಅಪರೂಪದ ದೃಶ್ಯ ಕಣ್ತುಂಬಿಕೊಂಡ ಜನರು

Otters' fun in Tungabhadra River: People are amazed by a rare sight

ತುಂಗಭದ್ರಾ ನದಿಯಲ್ಲಿ ನೀರುನಾಯಿಗಳ ಪುಳಕ : ಅಪರೂಪದ ದೃಶ್ಯ ಕಣ್ತುಂಬಿಕೊಂಡ ಜನರು 

ಕಂಪ್ಲಿ:ಮಾ.11. ಕಳೆದ ಒಂದೆರಡು ದಿನದಿಂದ ಕಂಪ್ಲಿಯ ತುಂಗಭದ್ರ ನದಿಗೆ ಹೆಚ್ಚಿನ ನೀರು ಹರಿಸಿದ್ದು, ಈ ನೀರಿನ ಹೊರ ಹರಿವಿನ ಹೆಚ್ಚಳದಿಂದಾಗಿ ನೀರುನಾಯಿಗಳು ಪ್ರತ್ಯಕ್ಷವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಕಂಡು ಬಂತು.  ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಭಾನುವಾರ ತಂಡ ತಂಡವಾಗಿ ನೀರು ನಾಯಿಗಳು ಹೆಚ್ಚಾಗಿ ಪ್ರತ್ಯಕ್ಷವಾಗುತ್ತಿದ್ದು, ಪ್ರವಾಸಿಗರ ಗಮನ ಸೆಳೆಯುತ್ತಿವೆ. ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಕಾಲು, ಸ್ವರ್ಶ ಸೂಕ್ಷ್ಮ ಮೀಸೆ ಇದರ ದೈಹಿಕ ವಿಶೇಷತೆ. ಶುದ್ಧ ನೀರಿನಲ್ಲಿ ವಾಸಿಸುವ ನೀರುನಾಯಿ ಚಾಣಾಕ್ಷ ಮೀನು ಬೇಟೆಗಾರವಾಗಿದೆ. ತಕ್ಷಣಕ್ಕೆ ಮುಂಗುಸಿಯ ಮುಖ ಹೋಲುವ ಇದು ವಿರಳ ಗೋಚರ ಜೀವಿ. ಶಬ್ದ, ಜನರಿಂದ ದೂರವಿರುವ ಅಂಜುಬುರುಕ. ಅಪರೂಪಕ್ಕೆ ಎದುರಾಗುವ ಜಲಚರ, ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಬೇಟೆ ಆಡುವಲ್ಲಿ ನಿಷ್ಣಾತ. ನೀರು ನಾಯಿಗಳು ಸ್ವಚ್ಚಂದವಾಗಿ ಆಟವಾಡುವುದನ್ನು ಕಂಡು ಜನರು ಕೂಡ ಖುಷಿಯಾಗಿದ್ದಾರೆ. ಕಳೆದ ವರ್ಷ ಭರ್ತಿಯಾದ ಜಲಾಶಯದಿಂದಾಗಿ ಈಗ ನದಿಯಲ್ಲಿ ನೀರಿನ ಪ್ರಮಾಣ ತುಸು ಹೆಚ್ಚಾಗಿದ್ದು, ಹರಿವಿಯುವ ನೀರಿನ ಈಜುವ ನೀರುನಾಯಿಗಳ ದೃಶ್ಯ ಮನಮೋಹಕವಾಗಿದೆ. ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನದಿಯಲ್ಲಿ ಅಪರೂಪದ ಪ್ರಾಣಿ ನೀರು ನಾಯಿಗಳು ಕಂಡು ಬರುತ್ತಿರುವುದು ವನ್ಯಜೀವಿ ಪ್ರೇಮಿಗಳಿಗೆ ಖುಷಿ ತಂದಿದೆ. ಈಗಾಗಲೇ ಸರ್ಕಾರ ತುಂಗಭದ್ರಾ ಜಲಾಶಯದಿಂದ ಕಂಪ್ಲಿ ಸೇತುವೆ ವರೆಗಿನ ಪ್ರದೇಶವನ್ನು ನೀರುನಾಯಿ ಸಂರಕ್ಷಣಾ ಪ್ರದೇಶ ಎಂದು ಘೋಷಿಸಿದ ಹಿನ್ನಲೆ ನೀರು ನಾಯಿಗಳು ಸ್ವತಂತ್ರವಾಗಿ ಜೀವಿಸುತ್ತಿವೆ.  ಇಲ್ಲಿನ ಕಂಪ್ಲಿ-ಗಂಗಾವತಿ ಮಧ್ಯದ ತುಂಗಭದ್ರಾ ನದಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ನೀರು ನಾಯಿ ಕಂಡು ಖುಷಿ ಪಡುತ್ತಿದ್ದಾರೆ. ಕೋಟೆ ಪ್ರದೇಶದ ನದಿಯಲ್ಲಿ ನೀರುನಾಯಿಗಳು ಕಂಡು ಬರುತ್ತಿವೆ. ಸೂಕ್ಷ್ಮ ಜೀವಿಗಳು ಕಂಡುಬರುತ್ತಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಕೂಡ ಆಶಾಭಾವ ಒಡಮೂಡಿದೆ. ನದಿ ಹಾಗೂ ಪಟ್ಟಣದ ಸೋಮಪ್ಪ ಕೆರೆಯಲ್ಲಿ ನೀರುನಾಯಿ ಕುಟುಂಬವೊಂದು ಪ್ರತ್ಯಕ್ಷವಾಗಿದೆ. ನದಿಯಿಂದ ಹೊರಬಂದು ಆಗಾಗ ದರ್ಶನ ನೀಡುವ ಐದಾರು ನೀರುನಾಯಿಗಳ ಗುಂಪು ಜನರ ದೃಷ್ಟಿಗೆ ನಾಚಿ ಮತ್ತೆ ನೀರಿಗೆ ಇಳಿಯುತ್ತಿವೆ. ಈ ದೃಶ್ಯವನ್ನು ಕಂಡು ಜನರು ಪುಳಕಿತರಾಗಿದ್ದಾರೆ. ವಾಸ ಸ್ಥಾನ: ಇಲ್ಲಿನ ತುಂಗಭದ್ರಾ ನದಿಯು ನೀರುನಾಯಿಗಳಿಗೆ ವಾಸಸ್ಥಾವವಾಗಿದೆ. ನದಿಯಲ್ಲಿ ನೀರು ಹೆಚ್ಚಾದಾಗ ಮಾತ್ರ ಹೊರಗೆ ಕಾಣಿಸಿಕೊಳ್ಳುತ್ತವೆ. ತೀರಾ ನಾಚಿಕೆ ಸ್ವಭಾವದ ನೀರುನಾಯಿಗಳು ಮೂರು ದಿನಗಳಿಂದ ಕಂಪ್ಲಿ ನದಿಯಲ್ಲಿ ಪ್ರತ್ಯಕ್ಷವಾಗಿದ್ದು, ನೋಡುಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನದಿಯಲ್ಲೇ ವಾಸಿಸುವ ಪರಿಯನ್ನು ಹೊಂದಿದ್ದು, ನೀರಿನ ಪ್ರಮಾಣ ಹೆಚ್ಚಾದಾಗ ಮಾತ್ರ ಹೊರಗಡೆ ಬರುವದುಂಟು. ಈ ವೇಳೆ ಮನುಷ್ಯನ ಕಣ್ಣಿಗೆ ಬೀಳುತ್ತವೆ. ನದಿಯಲ್ಲಿ ನೀರು ಹೆಚ್ಚಾದಾಗ ಆಹಾರ ಸಿಗುವುದು ಅಪರೂಪವಾಗುತ್ತದೆ. ಮೀನುಗಳು ಕೈಗೆ ಸಿಗದಿದ್ದಾಗ ಆಹಾರ ಅರಸಿ ನಾಲೆ, ಹಳ್ಳ, ನದಿ ದಡಕ್ಕೆ ಬರುತ್ತವೆ. ಏಡಿ, ಕಪ್ಪೆ ಸೇರಿ ಇತರೆ ಪ್ರಾಣಿಗಳನ್ನು ಆಹಾರವಾಗಿವೆ ಎನ್ನಲಾಗುತ್ತಿದೆ. ತುಂಗಭದ್ರಾ ನದಿಯಲ್ಲಿ ಈಜಾಡುತ್ತಿರುವ ನೀರುನಾಯಿಗಳು ಸಡಗರ, ಸಂಭ್ರಮದಿಂದ ಇರುವಂತೆ ಗೋಚರವಾಗುತ್ತಿವೆ. ಕೆಲ ಸಮಯದ ಬಳಿಕ ದಡವನ್ನೇರಿ ಕುಳಿತುಕೊಳ್ಳುತ್ತ, ಮುದ್ದಾಡುವ ದೃಶ್ಯ ಮನಮೋಹಕ. ನೀರಿನಲ್ಲಿ ಸಿಕ್ಕ ಮೀನುಗಳನ್ನು ದಡಕ್ಕೆ ತಂದು ಸೇವಿಸುವುದು ಇವುಗಳ ದಿನಚರಿಯಾಗಿದೆ. ಇಲ್ಲಿನ ನೀರಿನಲ್ಲಿ ನೀರುನಾಯಿಗಳ ಪುಳಕ ನೋಡಿ, ಪ್ರವಾಸಿಗರು ಆಕರ್ಷಿತರಾಗಿದ್ದಾರೆ.