ತಾಳಿಕೋಟಿ 29: ವಿಜಯಪುರ ನಗರ ಶಾಸಕ, ಹಿರಿಯ ರಾಜಕಾರಣಿ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಉಚ್ಚಾಟಿಸಿರುವುದರಿಂದ ಕರ್ನಾಟಕದ ಬಿಜೆಪಿ ಕಾರ್ಯಕರ್ತರಿಗೆ ತೀವ್ರ ಮುಜುಗರವಾಗಿದ್ದು ಪಕ್ಷದ ವರಿಷ್ಠರು ಈ ತೀರ್ಮಾನವನ್ನು ಮರು ಪರೀಶೀಲಿಸಬೇಕು ಎಂದು ಬಿಜೆಪಿ ಯುವ ಮುಖಂಡ ಮಾನಸಿಂಗ್ ಕೊಕಟನೂರ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರು ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಹೋರಾಟದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅವರೊಬ್ಬ ಮಾಸ್ ನಾಯಕರಾಗಿದ್ದು ಪ್ರಬಲ ಸಮಾಜವನ್ನು ಪ್ರತಿನಿಧಿಸುತ್ತಾರೆ, ರಾಜ್ಯದಲ್ಲಿ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.
ಅವರ ಉಚ್ಚಾಟನೆಯ ನಿರ್ಧಾರದಿಂದ ಪಕ್ಷದ ವರ್ಚಸ್ಸಿಗೆ ಸಾಕಷ್ಟು ಧಕ್ಕೆಯಾಗಿದೆ ಇದು ಭವಿಷ್ಯದಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಆಗಬಹುದಾಗಿದೆ, ಅವರು ಪಕ್ಷದ ವಿರುದ್ಧವಾಗಿ ಮಾತನಾಡಿಲ್ಲ ಕೆಲವು ನಾಯಕರ ಕುರಿತು ಮಾತನಾಡಿದ್ದಾರೆ ಆದರೂ ವರಿಷ್ಠರ ತೀರ್ಮಾನಕ್ಕೆ ಕಾರ್ಯಕರ್ತ ರಾದ ನಾವು ಭದ್ದರಾಗಿದ್ದೇವೆ, ಆದರೆ ಪಕ್ಷದ ಹಿತ ದೃಷ್ಟಿಯಿಂದ ನನ್ನಂತಹ ಸಾವಿರಾರು ಕಾರ್ಯಕರ್ತರ ಒತ್ತಾಸೆಯಂತೆ ಉಚ್ಚಾಟನೆ ಕುರಿತು ಪಕ್ಷದ ವರಿಷ್ಠರು ಮತ್ತೊಮ್ಮೆ ಪರೀಶೀಲಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ತಿಳಿಸಿದರು.