ನವದೆಹಲಿ 21: ಛತ್ತೀಸಗಢದಲ್ಲಿ ಬುಧವಾರ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು 'ಚಾರಿತ್ರಿಕ ಸಾಧನೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
ಬಸ್ತಾರ್
ಪ್ರದೇಶದಲ್ಲಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ನಕ್ಸಲರು ಹತ್ಯೆಗೀಡಾಗಿದ್ದಾರೆ.
ಈ
ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, 'ಛತ್ತೀಸಗಢದ ನಾರಾಯಣಪುರದಲ್ಲಿ ಭದ್ರತಾ ಪಡೆಗಳು ನಡೆಸಿರುವ ಎನ್ಕೌಂಟರ್ನಲ್ಲಿ 27 ನಕ್ಸಲರನ್ನು ಹತ್ಯೆಗೈಯಲಾಗಿದೆ. ಇದರಲ್ಲಿ ನಕ್ಸಲ್ ಚಟುವಟಿಕೆಯ ಬೆನ್ನೆಲುಬು ಆಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಹತ್ಯೆಗೀಡಾಗಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ನಕ್ಸಲರ
ವಿರುದ್ಧ ದೇಶ ನಡೆಸುತ್ತಿರುವ ಮೂರು ದಶಕಗಳ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ನಾಯಕನ ನಿಗ್ರಹ ಮಾಡಲಾಗಿದೆ. ಈ ಕಾರ್ಯಾಚರಣೆಗಾಗಿ ನಮ್ಮ
ಧೈರ್ಯಶಾಲಿ ಭದ್ರತಾ ಪಡೆಗಳನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಆಪರೇಷನ್
ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆಯ ಬಳಿಕ ಛತ್ತೀಸಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ 54 ನಕ್ಸಲರನ್ನು ಬಂಧಿಸಲಾಗಿದ್ದು, 84 ನಕ್ಸಲರು ಶರಣಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2026ರ
ಮಾರ್ಚ್ 31ರೊಳಗಾಗಿ ನಕ್ಸಲ್ ನಿರ್ಮೂಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಪುನರುಚ್ಚರಿಸಿದ್ದಾರೆ.