ಗದಗ 19: ರಾಜ್ಯದಲ್ಲಿ ಬರಗಾಲ ತೀವ್ರ ಸ್ವರೂಪ ಪಡದಿರುವುದರಿಂದ ಒಟ್ಟು 2999 ಗ್ರಾಮಗಳಿಗೆ ಟ್ಯಾಂಕರ ನೀರು ಪೂರೈಸಲಾಗುತ್ತಿದೆ ಎಂದು ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಹೇಳಿದರು.
ಈಗಾಗಲೇ ಸುಮಾರು 730 ಕೋಟಿ ರೂ. 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜಂಟಿ ಖಾತೆಯಲ್ಲಿದೆ. ಜಾನುವಾರುಗಳಿಗೆ ಕೂಡಿಯುವ ನೀರಿನ, ಮೇವಿನ ಅಭಾವ ಆಗದಂತೆ ಜನರಿಗೆ ಉದ್ಯೋಗ ದೊರೆಯುವಂತೆ ಹಾಗೂ ಯಾರು ಗುಳೆ ಹೊಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕಳೆದ ಬಾರಿ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 10.47 ಕೋಟಿ ಮಾನವ ದಿನಗಳನ್ನು ಉತ್ಪದಿಸಲಾಗಿದ್ದು, ಈ ಬಾರಿ 13 ಕೋಟಿ ಮಾನವ ದಿನಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 150 ದಿನಗಳ ಉದ್ಯೋಗ ನೀಡಲಾಗುತ್ತ್ತಿದೆಯೆಂದು ತಿಳಿಸಿದರು. ರಾಜ್ಯದಲ್ಲಿ ಕಳೆದ 14 ವರ್ಷಗಳಿಂದ ಸತತ ಬರಗಾಲವಿದ್ದು, ಪ್ರತಿ ವರ್ಷ ತಲೆದೋರುವ ಈ ಬರಗಾಲವನ್ನು ಎದುರಿಸಲು ಶಾಶ್ವತ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಬೇಕಾಗಿದ್ದು ಈ ಕುರಿತಂತೆ ಜಿಲ್ಲಾಡಳಿತಗಳು ಸ್ಥಳೀಯ ಹಾಗೂ ಅಗತ್ಯ ಸಂಪನ್ಮೂಲಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತಾವನೆಯನ್ನು ತಯಾರಿಸಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯಲ್ಲಿ ಶೇ. 41 ರಷ್ಟು ಕೊರತೆ ಎದುರಿಸಿದ್ದು ಮುಂಗಾರು ಮಳೆಯವರೆಗೂ ಜಿಲ್ಲಾಡಳಿತಗಳು ತಮ್ಮ ಜಿಲ್ಲೆಯ ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಸಚಿವ ದೇಶಪಾಂಡೆ ಸೂಚಿಸಿದರು.