ಖಾಸಗಿ ಮುಸುಕುಧಾರಿ ಸೇನೆಗಳಿಂದ ಹಿಂಸೆ ತಾಂಡವ; ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಆತಂಕ

ಬೆಂಗಳೂರು, ಜ.28 :         ದೇಶದಲ್ಲಿ ಖಾಸಗಿ ಸೇನೆ ಮೂಲಕ  ಹಿಂಸೆ ತಾಂಡವವಾಡುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 

ನಗರದ ಗಾಂಧಿ ಭವನ ಸಭಾಂಗಣದಲ್ಲಿ ಮಹಾತ್ಮಾ ಗಾಂಧಿ ಹುತಾತ್ಮರಾದ ಜನವರಿ 30 ರ ಕಾರ್ಯಕ್ರಮ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದೇಶದಲ್ಲಿ ಅಘೋಷಿತ ವಾತಾವರಣ ನಿರ್ಮಾಣ ಮಾಡಲಾಗಿದ್ದು, ಕಳೆದ ಐದಾರು ವರ್ಷಗಳಿಂದ ಹಿಂಸೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕೆಲ್ಲಾ, ಖಾಸಗಿ ಸೇನೆಯೇ ಕಾರಣವಾಗಿದ್ದು, ಇಂತಹ ಕೃತ್ಯಗಳಿಗೆ ವ್ಯವಸ್ಥೆಯ ಬೆಂಬಲ ಇದೆ ಎಂದು ಅವರು ದೂರಿದರು.

ದೇಶದ ವಾಸ್ತವ ಸ್ಥಿತಿ ಗತಿಗಳ ಬಗ್ಗೆ ಮಾತನಾಡುವವರಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ. ಬಳಿಕ, ಅವರನ್ನು ಹತ್ಯೆ ಮಾಡುವ ಹಂತಕ್ಕೂ ತಲುಪಿದ್ದಾರೆ. ಹಾಗಾಗಿಯೇ, ನಾವು ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಕಳೆದುಕೊಂಡೆವು. ಆದರೂ ನಾವು ಸತ್ಯ ಹೇಳಲು ಹೆದರುವುದಿಲ್ಲ ಎಂದು ಅವರು ತಿಳಿಸಿದರು.

ಸಾಹಿತಿ ಡಾ.ಕೆ.ಶರೀಫಾ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ, ಎನ್ಆರ್ ಸಿ ವಿರೋಧಿಸುವವರನ್ನು ಕೊಲೆ ಮಾಡಲಾಗುತ್ತಿದ್ದು, ಇಂತಹ ಘಟನೆಗಳು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ನಡೆದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನ ಜ.30ರಂದು ಮಹಾ ಸಂಕಲ್ಪ ದಿನ ಹಮ್ಮಿಕೊಂಡಿದ್ದು, ಅಂದು ಸಂಜೆ ಬೆಂಗಳೂರಿನ ಪುರಭವನ ಮುಂಭಾಗ ಮಾನವ ಸರಪಳಿ, ಸಂವಿಧಾನ ಪೀಠಿಕೆ ಪ್ರತಿಜ್ಞೆ ಸ್ವೀಕರಿಸಿ, ಎನ್ ಆರ್ ಸಿ, ಸಿಎಎ, ಎನ್ ಪಿಆರ್ ವಿರುದ್ದ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು. 

ಆ ದಿನದಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ಜಿ.ರಾಮಕೃಷ್ಣ, ಸೇರಿದಂತೆ ರಾಜ್ಯದ ಹಲವು ಚಿಂತಕರು, ಯುವ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕವಯತ್ರಿ ಡಾ.ಸುಕನ್ಯಾ ಮಾತನಾಡಿ, ಇಂದಿನ ವಾತಾವರಣ ಭಯದಿಂದ ಕೂಡಿದ್ದು, ಹೊರಗಡೆಯಿಂದ ಮಾಂಸ ಖರೀದಿಸಲು ಆತಂಕವಾಗಿದೆ. ಯಾರು ನಮ್ಮ ಮೇಲೆ ಕ್ಷುಲ್ಲಕ ವಿಚಾರಗಳನ್ನಿಟ್ಟು ದಾಳಿ ನಡೆಸುತ್ತಾರೂ  ಎನ್ನುವ ಭಯ ಕಾಡುತ್ತಿದೆ ಎಂದು ನುಡಿದರು.

ರಂಗ ಕರ್ಮಿ ಪ್ರಸನ್ನ ಹೆಗ್ಗೋಡು, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಸೌಹಾರ್ದ ಕರ್ನಾಟಕ ಸಮನ್ವಯಕಾರ ಎಸ್.ವೈ‌.ಗುರುಶಾಂತ್ ಸೇರಿದಂತೆ ಪ್ರಮುಖರಿದ್ದರು.