ವಿಜಯಪುರ, 22 : ಪ್ರಖರತೆ ಮತ್ತು ಸ್ಪಷ್ಟತೆ ಇರುವ ಬರವಣಿಗೆಯೇ ಜನರ ವಿಶ್ವಾಸ ಗಳಿಸುವುದರಲ್ಲಿ ಸಹಾಯಕವಾಗುತ್ತದೆ ಎಂದು ಮಹಿಳಾ ವಿವಿಯ ಐಕ್ಯೂಎಸಿ ನಿರ್ದೇಶಕ ಪ್ರೊ.ಪಿ.ಜಿ.ತಡಸದ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ವುಮೆನ್ ಮೀಡಿಯಾ ಕ್ಲಬ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಟಿವಿ ಸುದ್ದಿ ಬರವಣಿಗೆ’ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸುದ್ದಿಯನ್ನು ಜನರ ಹೃದಯಕ್ಕೆ ನೇರವಾಗಿ ತಲುಪಿಸುವುದು ಟಿವಿ ಮಾಧ್ಯಮದ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಬಳಸುವ ಭಾಷೆ ಸರಳ, ಸ್ಪಷ್ಟ ಮತ್ತು ಜನರಿಗೆ ಆಕರ್ಷಕವಾಗಿರಬೇಕು. ಪ್ರತಿ ಪದವೂ ಅರ್ಥಪೂರ್ಣವಾಗಿದ್ದು, ಜನರ ಮನಸ್ಸಿನಲ್ಲಿ ಪ್ರಭಾವ ಬೀರುವಂತೆ ಇರಬೇಕು. ಭಾಷೆಯ ಶೈಲಿ ಮೃದು, ಸಂವೇದನಾಶೀಲ ಹಾಗೂ ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ಟಿವಿ ಬರವಣಿಗೆ ಇಂದು ದೊಡ್ಡ ಸವಾಲಾಗಿ ರೂಪುಗೊಂಡಿದೆ, ಏಕೆಂದರೆ ಪ್ರತಿ ಕ್ಷಣವೂ ತ್ವರಿತವಾಗಿ ಬದಲಾಗುತ್ತಿರುವ ಲೋಕದಲ್ಲಿ ನಿಖರವಾದ, ಸ್ಪಷ್ಟವಾದ ಮತ್ತು ಆಕರ್ಷಕ ಸುದ್ದಿಯನ್ನು ತಲುಪಿಸುವ ಹೊಣೆಗಾರಿಕೆ ಮಾಧ್ಯಮದ ಮೇಲೆ ಇದೆ. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲು ಭಾಷಾ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಪರಿಣಾಮಕಾರಿಯಾದ ಬರವಣಿಗೆ ಮಾತ್ರವೇ ಪ್ರೇಕ್ಷಕರ ಗಮನ ಸೆಳೆಯಲು ಮತ್ತು ಸತ್ಯಸ್ಥಿತಿಯನ್ನು ಸರಿಯಾಗಿ ಪ್ರಸ್ತುತಪಡಿಸಲು ನೆರವಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ ಬೆಂಗಳೂರಿನ ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ಸೀನಿಯರ್ ಕಾಪಿ ಎಡಿಟರ್ ಪೂರ್ಣಿಮಾ ಹೀರೆಮಠ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ, ಬೋಧಕ ಬೋದಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಸಂಶೋಧನಾ ವಿದ್ಯಾರ್ಥಿನಿಯರಾದ ಸುಷ್ಮಾ ಪವಾರ ಸ್ವಾಗತಿಸಿದರು. ಪವಿತ್ರಾ ಕಂಬಾರ ಅತಿಥಿಯರನ್ನು ಪರಿಚಯಿಸಿದರು. ಪಿಲೋಮಿನಾ ನಿರೂಪಿಸಿದರು ಹಾಗೂ ಜಯಶ್ರೀ ತಳವಾರ ವಂದಿಸಿದರು.