ವಿಜಯಪುರ: ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ನ್ಯಾ.ಪ್ರಭಾಕರರಾವ್ ಸಾಂತ್ವನ

ಲೋಕದರ್ಶನ ವರದಿ

ವಿಜಯಪುರ 04: ಇಂಡಿ ಪಟ್ಟಣದ ಅಮರ ಇಂಟರ್ನ್ಯಾಶನಲ್ ಹೋಟೆಲ್ನಲ್ಲಿ ಮಂಗಳವಾರ ಶೌಚಗುಂಡಿ ಸ್ವಚ್ಛಗೊಳಿಸಲು ಇಳಿದ ಸಂದರ್ಭದಲ್ಲಿ ಮೃತಪಟ್ಟ ಮೂವರುಕಾರ್ಮಿಕರ  ಕುಟುಂಬಸ್ಥರನ್ನು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು  ಆದ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಭಾಕರರಾವ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. 

ಶೌಚಗುಂಡಿ ಸ್ವಚ್ಛಗೊಳಿಸಲು ಇಳಿದ ಸಂದರ್ಭದಲ್ಲಿ ಮೃತರಾದ ಕಾರ್ಮಿಕರ  ಲಾಲಪ್ಪ ಸೋಮಣ್ಣ ಬಂಡೇನವರ, ನಬಿಲಾಲ ಎಕ್ಕೆವಾಲೆ ಹಾಗೂ ಗುಡುಸಾಬ ಬಾಗವಾನ್ ಕುಟುಂಬಗಳ ವಾರಸುದಾರರಿಗೆ ಭೇಟಿ ಮಾಡಿದ ಹಿರಿಯ ದಿವಾಣಿ ನ್ಯಾಯಾಧೀಶರಾದ ಪ್ರಭಾಕರರಾವ್ ಅವರು, ಸರ್ಕಾರದಿಂದ ಅವಶ್ಯಕ ಪರಿಹಾರ ಧನವನ್ನು ಕಾನೂನಿನ್ವಯ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು. ಅದರಂತೆ ಕೆಲಸಕ್ಕೆ ಯೋಗ್ಯವಲ್ಲದ ಸ್ಥಳದಲ್ಲಿ ಕಾರ್ಮಿಕರನ್ನು  ಬಳಸಿ, ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೂ ಸೂಚನೆ ನೀಡಿದರು.

ಮೃತಪಟ್ಟಿರುವ ಮೂರು ಕಾರ್ಮಿಕರಲ್ಲಿ ಓರ್ವ ಕಾರ್ಮಿಕರ  ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಅಧಿನಿಯಮದಡಿ ಇವರ ಕುಟುಂಬಸ್ಥರಿಗೆ ಸಹಾಯ ಸೌಲಭ್ಯ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣದ ಸೌಲಭ್ಯ ಹಾಗೂ ವಸತಿ ನಿಲಯದ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಉಪನಿರ್ದೇಶಕ ಮಹೇಶ ಪೋದ್ದಾರ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಇಂಡಿ ಸಿವ್ಹಿಲ್ ಹಿರಿಯ ದಿವಾಣಿ ನ್ಯಾಯಾಧೀಶರಾದ ಅರವಿಂದ ಎಸ್. ಹಾಗರಗಿ, ಪೋಲಿಸ್ ಉಪಾಧಿಕ್ಷಕರಾದ ನೇಮಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋದ್ದಾರ ಅವರು ಉಪಸ್ಥಿತರಿದ್ದರು