ಮಹಾಲಿಂಗಪುರ 07: ಇಂದಿನ ರಾಜಕಾರಣಿಗಳು ಸಾಮಾಜಿಕ ಸೂಕ್ಷ್ಮತೆಗಳನ್ನು ಮರೆತು, ಅಸಭ್ಯ ಭಾಷೆಗಳನ್ನು ಬಳಸುತ್ತ ಪ್ರಜಾಪ್ರಭುತ್ವದ ತಳಹದಿಯೆ ಅಲ್ಲಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಶಾಸಕರಾದ ವೈ.ಎಸ್.ವಿ.ದತ್ತಾ ಇವತ್ತಿನ ರಾಜಕಾರಣದ ಕುರಿತು ಬೇಸರ ವ್ಯಕ್ತಪಡಿಸಿ ಮಾತನಾಡಿದರು.
ಭಾನುವಾರ ಮಧ್ಯಾಹ್ನ ಎಪಿಎಂಸಿ ದಲಾಲ ವರ್ತಕರ ಸಂಘದ ಸಭಾ ಭವನದಲ್ಲಿ ಕಾರ್ಮಿಕರ ಪರವಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟದ ಕುರಿತು ನಡೆದ ಸಭೆ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿ ಮಾತನಾಡಿದ ಅವರು, ಆರು ದಶಕಗಳ ಹಿಂದೆ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಸಾಮಾಜಿಕ ನ್ಯಾಯ ತತ್ವ ಸಿದ್ಧಾಂತಗಳಡಿಯ ರಾಜಕಾರಣ ಬೇರೆ ಇಂದಿನ ರಾಜಕಾರಣವೇ ಬೇರೆ.
ಅಂದು ದೇಶ, ರಾಜ್ಯಗಳು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಸಮಾನತೆಯನ್ನು ಹೊಂದಬೇಕೆಂಬ ಉದ್ದೇಶವನ್ನು ಹೊಂದಿತ್ತು. ಇಂದು ಬೆರೆಳೆನಿಕೆಯಷ್ಟು ರಾಜಕಾರಣಿಗಳಿಂದ ನೆಮ್ಮದಿ ವಾತಾವರಣ ಹದಗೆಟ್ಟು ಹೋಗಿದೆ ಎಂದರು.ಇಂದು ವಿಧಾನಸೌಧದಲ್ಲಿಯಾಗಲಿ, ಸಾರ್ವಜನಿಕವಾಗಿ ರಾಜಕಾರಣಿಗಳು ಕೇವಲ ಪರಸ್ಪರ ಹೊಗಳಿಕೆ, ತೆಗಳಿಕೆಯಲ್ಲಿಯೆ ಕಾಲ ಕಳೆಯುತ್ತಿದ್ದಾರೆ.
ಇದರಿಂದ ಬಡವರ, ಮಧ್ಯಮ ವರ್ಗದ, ಕಾರ್ಮಿಕರ ಕಲ್ಯಾಣ ಕಾರ್ಯ ಮೊಟಕುಗೊಳ್ಳುತ್ತಿದೆ ಎನಿಸುತ್ತಿದೆ.ಈ ವ್ಯವಸ್ಥೆ ವಿರುದ್ಧ ಸರ್ಕಾರದ ಮಟ್ಟದಲ್ಲಿ ನನ್ನ ಹೋರಾಟ ಮುಂದುವರಿಯಲಿದೆ ಎಂದರು. ಉಳಿದಂತೆ ಪಟ್ಟಣ ಪ್ರದೇಶ, ಹಿಂದುಳಿದ ಗ್ರಾಮೀಣ ಪ್ರದೇಶಗಳು ಮೂಲಭೂತ ಸಮಸ್ಯೆಗಳಿಂದ ನಲುಗುತ್ತಿವೆ. ಇವುಗಳ ಕುರಿತು ಆರೋಗ್ಯಕರ ಚರ್ಚೆ ಮಾಡುವ ಬದಲು ರಾಜಕಾರಣಿಗಳು ವಿನಾಕಾರಣ ಕೆಸರೆರಚಾಟದಲ್ಲಿ ಮಗ್ನರಾಗಿದ್ದಾರೆ ಎಂದು ದೂರಿದರು.