ಮನೋಲ್ಲಾಸ ನೀಡಿದ ಕವಿ ಗೋಷ್ಠಿ ರಂಜಿಸಿದ ಸಾಂಸ್ಕೃತಿಕ ಕಲರವ
ದೇವರಹಿಪ್ಪರಗಿ 04: ಪಟ್ಟಣದಲ್ಲಿ ಶುಕ್ರವಾರದಂದು ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಅದರಲ್ಲೂ ಮನೋಲ್ಲಾಸ ನೀಡಿದ ಶರಣ, ಕವಿ ಹಾಗೂ ಜಾನಪದ ಗೋಷ್ಠಿಗಳು ಹಾಗೂ ರಂಜಿಸಿದ ಸಾಂಸ್ಕೃತಿಕ ಕಲರವ. ಶರಣ ಗೋಷ್ಠಿ-ದೇವರಹಿಪ್ಪರಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿ " ಶರಣ ಗೋಷ್ಠಿಯನ್ನು" ಉದ್ಘಾಟಿಸಿದ ನ್ಯಾಯವಾದಿ ಮಹ್ಮದಗೌಸ ಹವಾಲ್ದಾರ ಅವರು ಮಾತನಾಡಿ, ಮಡಿವಾಳ ಮಾಚಿದೇವರು ಹಾಗೂ ಹನುಮಂತರಾಯ ಮೊಹರೆ ಇಬ್ಬರು ಶರಣರ ಜೀವನ ಚರಿತ್ರೆ ಒಳಗೊಂಡ ಗೋಷ್ಠಿಯಾಗಿದೆ ಈ ಇಬ್ಬರು ಮಹಾನುಭಾವರ ಜನ್ಮಸ್ಥಳ ದೇವರ ಭೂಮಿ ದೇವರಹಿಪ್ಪರಗಿ ಆಗಿದೆ, ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕೆಲಸ ಬಹಳ ಮಹತ್ವದ್ದಾಗಿದೆ. ಶರಣರ ಹಾಗೂ ಕಾಯಕನಿಷ್ಟರ ಮಡಿ ಬಟ್ಟೆಗಳನ್ನು ತಲೆ ಮೇಲೆ ಹೊತ್ತಿಕೊಂಡು "ವೀರ ಘಂಟೆಯನ್ನು" ಬಾರಿಸುತ್ತಾ ಭಕ್ತರಲ್ಲದವರು ಯಾರು ಮುಟ್ಟಬಾರದು ಎಂಬ ನಿಯಮವನ್ನು ವಿಧಿಸಿದ್ದು ಮಡಿವಾಳ ಮಾಚಿದೇವರ ಕಾಯಕ ನಿಷ್ಠೆಗೆ ಎತ್ತಿ ಹಿಡಿದ ಕೈಗನ್ನಡಿಯಾಗಿದೆ ಹಾಗೂ ಮೊಹರೆ ಹನುಮಂತರಾಯರು ಮಾಧ್ಯಮ ಲೋಕದ ದಿಗ್ಗಜ, ಸ್ವಾತಂತ್ರ್ಯ ಹೋರಾಟಗಾರರು ಕರ್ನಾಟಕ ವೈಭವ ಪತ್ರಿಕೆಯ ಸಂಪಾದಕರಾಗಿ ದೇಶದ ಸ್ವತಂತ್ರಕ್ಕಾಗಿ ಹೋರಾಡಿ ಜೈಲುವಾಸ ಸಹ ಅನುಭವಿಸಿದ್ದಾರೆ.
ಅವರ ಕಾರ್ಯ ಸಾಧನೆ ಗುರುತಿಸಿ ಕರ್ನಾಟಕ ಸರ್ಕಾರ ಅವರ ಹೆಸರಲ್ಲಿ ಪ್ರತಿವರ್ಷ ಪ್ರಶಸ್ತಿ ಸಹ ಕೊಡುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಉಪನ್ಯಾಸವನ್ನು ಸಾಹಿತಿಗಳಾದ ಶ್ರೀಧರ ಆಸಂಗಿಹಾಳ ಹಾಗೂ ಎಸ್.ಎನ್. ಬಸವರೆಡ್ಡಿ ನೀಡಿದರು.ಕಾರ್ಯಕ್ರಮದ ಸಾನಿಧ್ಯವನ್ನು ಪರದೇಶಿ ಮಠದ ಪ.ಪೂ. ಶಿವಯೋಗಿ ಮಹಾಸ್ವಾಮಿಗಳು ಹಾಗೂ ಪೂಜ್ಯ ದ್ರಾಕ್ಷಾಯಣಿ ಅಮ್ಮನವರು ವಹಿಸಿದ್ದರು. ಅಧ್ಯಕ್ಷತೆ ಪ್ರೊ. ಅಶೋಕ ಹೆಗಡೆ,ಅತಿಥಿಗಳಾಗಿ ಸುರೇಶ ಜತ್ತಿ, ಕಾಸಪ್ಪ ಜಮಾದಾರ, ರಾಜಶೇಖರ ಪೊಲೀಸಪಾಟೀಲ, ಕಾಸುಗೌಡ ಬಿರಾದಾರ ಸೇರಿದಂತೆ ಅನೇಕರಿದ್ದರು.
ಕವಿ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯರಾದ ಡಾ.ವ್ಹಿ.ಡಿ.ಐಹೊಳೆ, ಸಾಹಿತಿಗಳಾದ ಶಿಲ್ಪ ಭಸ್ಮೆಅವರು ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಷ.ಬ್ರ ಜಡಿ ಸಿದ್ದೇಶ್ವರ ಶ್ರೀಗಳು ವಹಿಸಿದ್ದರು. ಅನೇಕರು ಮುಖ್ಯ ಅತಿಥಿಗಳ ಸ್ಥಾನ ಅಲಂಕರಿಸಿದ್ದರು.ಸುಮಾರು 25ಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚನ ಮಾಡುವ ಮೂಲಕ ರಂಜಿಸಿದರು.*ಜಾನಪದ ಗೋಷ್ಠಿ-3* ಕಾರ್ಯಕ್ರಮದ ಉಪನ್ಯಾಸವನ್ನು ವಿಜಯಪುರ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಬಾಳನಗೌಡ ಪಾಟೀಲ (ಪಡಗಾನೂರ) ಅವರು ಮಾತನಾಡಿ,ಜಾನಪದ ಸಂಸ್ಕೃತಿಯ ಪ್ರತಿಯೊಂದು ವಿಚಾರಗಳು ಮೌಲ್ಯಯುತವಾಗಿದ್ದು, ಅದರ್ಶದ ಬದುಕು ಕಟ್ಟಿಕೊಳ್ಳಲು ದಾರೀದೀಪವಾಗಿ ಗಟ್ಟಿಗೊಂಡಿವೆ. ಜಾನಪದದ ಆಚರಣೆ, ಸಂಪ್ರದಾಯ, ನಂಬಿಕೆ, ಪದ್ಧತಿ ನಮಗೆ ಸಾಮಾಜಿಕ ಸಂವಿಧಾನಗಳಾಗಿ ಕೆಲಸ ಮಾಡುತ್ತಿವೆ. ಜಾನಪದದ ಮೇಲೆ ವಿದೇಶಿ ಸಂಸ್ಕೃತಿಯ ಕರಿನೆರಳು ಆವರಿಸಿರುವುದು ಒಳ್ಳೆಯದಲ್ಲ ಎಂದರು.ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಜಾನಪದದ ತುಂಬಾ ತಾಯಂದಿರೆ ತುಂಬಿಕೊಂಡಿದ್ದಾರೆ. ಜಾನಪದ ಪ್ರತಿಯೊಂದು ಆಚರಣೆಗಳನ್ನು ನಾವು ಇಂದು ಮರೆಯುತ್ತಿರುವುದು ವಿಷಾದನೀಯ ಎಂದು ಹೇಳಿತ್ತಾ ಜನಪದ ಹಾಡುಗಳನ್ನು ಹಾಡಿ ಜನ ಮನ ರಂಜಿಸಿದರು.
ಶಿಕ್ಷಕಿ ಶಿವಲೀಲಾ ಮುರಾಳ ಮಾತನಾಡಿ ಇಂದಿನ ಯುವಕರು ಜನಪದವನ್ನು ಬೇರೆ ರೀತಿಯಲ್ಲಿ ಅರ್ಥೈಸುತ್ತಿರುವುದು ದುರಂತ ಎಂದರು.ಅಧ್ಯಕ್ಷತೆಯನ್ನು ಸಾಹಿತಿ ರಾವುತ ತಳಕೇರಿ ವಹಿಸಿ ಮಾತನಾಡಿದರು. ನಿವಾಳಖೇಡ ದ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸಂಗಮೇಶ ಕೆರೆಪ್ಪಗೊಳ, ಕಸಾಪ ಜಿಲ್ಲಾಧ್ಯಕ್ಷರಾದ ಹಾಸಿಂಪೀರ ವಾಲಿಕಾರ,ಖಜಾಂಚಿ ಡಾ. ಸಂಗಮೇಶ ಮೇತ್ರಿ, ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ,ಸಿದ್ದು ಬುಳ್ಳಾ , ಉಮೇಶ ರೂಗಿ,ಗುರುರಾಜ ಆಕಳವಾಡಿ ಸೇರಿದಂತೆ ಮತ್ತಿತರರು ಇದ್ದರು. ನಂತರ ಕರ್ನಾಟಕ ಸುವರ್ಣ ಸಂಭ್ರಮ-50 ನಿಮಿತ್ಯ ಪರಿಷತ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ತಡರಾತ್ರಿ ಒಂದು ಗಂಟೆಯವರೆಗೆ ಸಾಂಸ್ಕೃತಿಕ ಕಲರವದಲ್ಲಿ ಕಲಾವಿದರು ತಮ್ಮ ಪ್ರತಿಭೆಯಿಂದ ಜನರನ್ನು ರಂಜಿಸಿದರು