ಶಿಕ್ಷಣ ಮತ್ತು ಆರ್ಥಿಕತೆ ಇರುವ ಸಮಾಜ ಯಾವಾಗಲೂ ಬಲಿಷ್ಟ- ಸ್ವಾಮೀಜಿ
ಹಾವೇರಿ 04: ಯಾವುದೇ ಒಂದು ಸಮಾಜ, ಜಾತಿ ಸುಭದ್ರವಾಗಿ ಬೆಳೆಯಬೇಕಾದರೆ ಶಿಕ್ಷಣ ಮತ್ತು ಆರ್ಥಿಕತೆ ಬಹಳ ಮುಖ್ಯವಾದದ್ದು. ಸಮಾಜದ ಜ್ಯೋತಿಗಳಾಗಿರುವ ಯುವ ಜನತೆ, ಹಾದಿ ತಪ್ಪಿದರೆ ಸಮಾಜದ ಸ್ವಾಸ್ಥ-್ಯ ಹಾಳಾಗುತ್ತದೆ.ಈ ನಿಟ್ಟಿನಲ್ಲಿ ಯುವ ಜನತೆ ಉತ್ತಮ ಶಿಕ್ಷಣ ಪಡೆದುಕೊಂಡು ಪ್ರಜ್ಞಾವಂತರಾಗಿ ಬಾಳಬೇಕು ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಬಸಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಇಪ್ಪಿಕೊಪ್ಪ ಆಲದಮ್ಮದೇವಿ ಹಾಗೂ ಬಸಾಪುರ ಆಲದಮ್ಮದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಶಿಕ್ಷಣ ಮತ್ತು ಆರ್ಥಿಕತೆ ಇರುವ ಸಮಾಜ ಯಾವಾಗಲೂ ಬಲಿಷ್ಟವಾಗಿರುತ್ತದೆ. ಪ್ರತಿ ಮನೆಯಲ್ಲಿ ಎಷ್ಟು ಜನ ವಿದ್ಯಾವಂತರು ಇದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದುಳಿದ ಶೋಷಿತ ಜನಾಂಗದವರು ಬಾಯಿಚಪಲ ಹಬ್ಬಗಳಿಗೆ ಕಡಿವಾಣ ಹಾಕದೆ ಇದ್ದರೇ ಉದ್ದಾರ ಆಗುವುದಿಲ್ಲ. ಆಹಾರ ಪದ್ಧತಿಯಲ್ಲಿ ಮಾಂಸಾಹಾರವೂ ಒಂದು. ಮಂಥನ ಮತ್ತು ಮನೆತನ ಹಾಳು ಮಾಡುವ ರೀತಿಯಲ್ಲಿ ಮಾಂಸಾಹಾರ ಸೇವನೆ ಮಾಡುತ್ತಿದ್ದು,ಅದಕ್ಕೆ ನನ್ನ ವಿರೋಧವಿದೆ.ಮೂಢನಂಬಿಕೆ ಹಬ್ಬ ಹಾಗೂ ಸಂಪ್ರದಾಯಗಳಿಗೆ ತಿಲಾಂಜಲಿ ಹಾಡಿದಾಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಅವರು ನೀವು ನಿಲ್ಲಿಸುವ ವಿಗ್ರಹದಲ್ಲಿ ನಾನಿಲ್ಲ. ತಲೆ ತಗ್ಗಿಸಿ ಓದುವ ಪುಸ್ತಕದಲ್ಲಿ ನಾನಿದ್ದೇನೆ. ದೇವಸ್ಥಾನ ಗಂಟೆಯ ಶಬ್ದದಲ್ಲಿ ನಾನಿಲ್ಲ, ಶಾಲಾ ಗಂಟೆಯ ಶಬ್ದದಲ್ಲಿ ನಾನಿದ್ದೇನೆ ಎಂದು ಹೇಳುತ್ತಾರೆ. ಆದ್ದರಿಂದ ಸಮಾಜದ ಬಂಧುಗಳೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಾಗೂ ದುಡಿಯುವ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ದೇವಸ್ಥಾನ ಕಟ್ಟಿ, ಪೂಜೆ ಮಾಡಿದಷ್ಟೇ ಊರಿನ ಶಾಲೆ, ಶಿಕ್ಷಕರನ್ನು ಗೌರವಿಸಿ.ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಹರಸಿದರು.
ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಶಾಸಕ ರುದ್ರ್ಪ ಲಮಾಣಿ ಮಾತನಾಡಿ ಹಿಂದಿನ ಕಾಲದಲ್ಲಿ ಅಮರಶಿಲ್ಪಿ ಜಕಣಾಚಾರಿ ಕಲ್ಲಿನ ದೇವಾಲಯ ನಿರ್ಮಿಸಿದ್ದರು. ಆದರೆ 21ನೇ ಶತಮಾನದಲ್ಲಿ ಜಕಣಾಚಾರಿ ಮಾದರಿಯಲ್ಲಿ ಬಸಾಪುರ ಗ್ರಾಮಸ್ಥರು ಆಲದಮ್ಮ ದೇವಿ ದೇವಸ್ಥಾನ ಕಟ್ಟಿಸಿದ್ದಾರೆ. ಆಲದಮ್ಮದೇವಿ ಗ್ರಾಮದ ಜನತೆಗೆ ಸುಖ, ಶಾಂತಿ ನೆಮ್ಮದಿ ಕೊಡಲಿ. ಈ ಕಾರ್ಯ ಬೇರೆ ಊರಿನವರಿಗೆ ಮಾದರಿಯಾಗಿದೆ. ಸಮುದಾಯ ಭವನ ನಿರ್ಮಾಣ ಮಾಡಿದರೆ, ಬಡವರಿಗೆ ಅನುಕೂಲವಾಗಲಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ವಿವಿಧ ಯೋಜನೆಗಳ ಅಡಿಯಲ್ಲಿ 25 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ತೂಗಣಸಿ ಅಮರೇಶ್ವರಮಠ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೇವಸ್ಥಾನ ಕಟ್ಟುವುದು ಪುಣ್ಯದ ಕೆಲಸ. ಉತ್ತಮ ಸಂಸ್ಕಾರ ಸಿಗಲಿ ಎನ್ನುವ ಉದ್ದೇಶದಿಂದ ದೇವಸ್ಥಾನ ಕಟ್ಟುತ್ತೇವೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರವನ್ನು ಎಂದು ಬಿಟ್ಟುಕೊಡಬಾರದು. ಭಾರತೀಯತೆಯನ್ನು ಎತ್ತಿ ಹಿಡಿಯಬೇಕು. ದೇವಸ್ಥಾನ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ದೇವಸ್ಥಾನದ ನೂರರಷ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇವೆಂದು ಗ್ರಾಮಸ್ಥರು ಸಂಕಲ್ಪ ಮಾಡಬೇಕು ಎಂದರು.
ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಭಾವೈಕ್ಯತಾಪೀಠ ಜಗದ್ಗುರು ಫಕ್ಕೀರಸಿದ್ದರಾಮ ಮಹಾಸ್ವಾಮಿಗಳು, ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯರು ಮಹಾಸ್ವಾಮಿಗಳು,ಗುತ್ತಲದ ಕಲ್ಮಠದ ಗುರುಸಿದ್ಧ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು.
ಧರ್ಮಸಭೆಯಲ್ಲಿ ಬಂಕಾಪುರ ಕೆಂಡದಮಠದ ರೇವಣಸಿದ್ದೇಶ್ವರ ಮಹಾಸ್ವಾಮಿಗಳು,ಮುಂಬೈ ರಾಮಕೃಷ್ಣ ಸಾಕಾವರದ ಸ್ವಾಮಿತತ್ವ ರೂಪಾನಂಧಜೀ ಮಹಾರಾಜ, ಮಾಜಿ ಶಾಸಕ ಶಿವರಾಜ ಸಜ್ಜನರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಹಾವೇರಿ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ ಮಾತನಾಡಿದರು.ದೇವಿ ಪ್ರಾಣಪ್ರತಿಷ್ಠಾಪನೆ ವೇಳೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಸೇರಿದಂತೆ ವಿವಿಧ ಮಠಾಶರು, ಪಕ್ಷಾತೀತ ರಾಜಕೀಯ ಧುರೀಣರು ಪಾಲ್ಗೊಂಡಿದ್ದರು. ಎಂ.ಎಂ ಮೈದೂರ, ಶ್ರೀಧರ ದೊಡ್ಡಮನಿ, ಪ್ರಭು ಬಿಷ್ಟನಗೌಡ್ರ, ಮುತ್ತಣ್ಣ ಯಲಿಗಾರ ಸೇರಿದಂತೆ ದೇವಸ್ಥಾನ ಸಮಿತಿ ಪದಾಕಾರಿಗಳು ವೇದಿಕೆಯಲ್ಲಿ ಹಾಜರಿದ್ದರು.