ಕೀಳರಿಮೆ ತೊರೆದು ಸ್ವಾಭಿಮಾನದ ಬದುಕು ರೂಢಿಸಿಕೊಳ್ಳಿ: ಪ್ರೊ.ಜಾಲವಾದಿ

Abandon inferiority complex and adopt a life of self-respect: Prof. Jalawadi

ಕೀಳರಿಮೆ ತೊರೆದು ಸ್ವಾಭಿಮಾನದ ಬದುಕು ರೂಢಿಸಿಕೊಳ್ಳಿ: ಪ್ರೊ.ಜಾಲವಾದಿ  

ತಾಳಿಕೋಟಿ 15: ಡಾ.ಬಿ.ಆರ್‌.ಅಂಬೇಡ್ಕರ್ ಅವರು ಬಾಲ್ಯದಲ್ಲಿಯೇ ಜಾತಿ ವ್ಯವಸ್ಥೆಯ ನೋವನ್ನು ಅನುಭವಿಸಿದರು. ಪ್ರತಿ ಹೆಜ್ಜೆಗೂ ಅಪಮಾನವನ್ನು ಸಹಿಸಿದರು. ಇದೆಲ್ಲವನ್ನು ಮೆಟ್ಟಿನಿಂತು ಕಡು ಬಡತನದ ಮಧ್ಯೆಯೂ ಉನ್ನತ ವ್ಯಾಸಂಗವನ್ನು ಮಾಡಿ ತಮ್ಮ ಅಗಾಧ ಪ್ರತಿಭೆಯಿಂದ ಶ್ರೇಷ್ಠ ಸಂವಿಧಾನವನ್ನು ರಚಿಸಿ ವಿಶ್ವದಲ್ಲಿಯೇ ಗುರುತಿಸಿಕೊಂಡರು. ಅವರು ಜ್ಞಾನ ಮತ್ತು ಪ್ರತಿಭೆಗೆ ಅತಿ ಹೆಚ್ಚು ಮಹತ್ವ ಕೊಟ್ಟರು. ಶಿಕ್ಷಣದಿಂದಲೇ ಸಮುದಾಯದ ಸಮಗ್ರ ಪ್ರಗತಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ಅವರ ಈ ಚಿಂತನೆಯನ್ನು ದಲಿತ ಸಮುದಾಯ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಕೂಡಗಿ ಸರ್ಕಾರಿ ಕಾಲೇಜ ಉಪನ್ಯಾಸಕ ಬಸವರಾಜ ಜಾಲವಾದಿ ಹೇಳಿದರು.  

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್‌.ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರವರ ಕನಸು ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕು ಎಂಬುದಾಗಿತ್ತು. ಮಹಿಳೆಯರಿಗೆ ಸಮಾನ ಗೌರವ ಶಿಕ್ಷಣ ಹಾಗೂ ಅವಕಾಶಗಳು ಸಿಗಬೇಕು ಎಂಬ ಅವರ ದೃಷ್ಟಿ ಕೋನವನ್ನು ಈಗಿನ ಸರ್ಕಾರ ಹಂತ ಹಂತವಾಗಿ ಸಾಕಾರಗೊಳಿಸುತ್ತಿದೆ. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದು ಅಂಬೇಡ್ಕರ್ ಅವರ ಬಹುದೊಡ್ಡ ಕೊಡುಗೆಯಾಗಿದೆ ಎಂದರು.  

ಶಿಕ್ಷಣ ಸಂಘಟನೆ ಹಾಗೂ ಹೋರಾಟ ಇವು ಅಂಬೇಡ್ಕರರ ಮೂಲ ಸಿದ್ದಾಂತವಾಗಿದ್ದವು. ಆದರೆ ನಾವಿಂದು ಶಿಕ್ಷಣ ಸಂಘಟನೆಯನ್ನು ಬಿಟ್ಟು ಕೇವಲ ಹೋರಾಟವನ್ನು ಮಾತ್ರ ಮಾಡುತ್ತಿದ್ದೇವೆ ಇದರಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದ ಅವರು ಮೊದಲು ಈ ಸಮಾಜ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕಾಗಿದೆ ಇದರ ಜೊತೆಗೆ ಅವರಿಗೆ ಉತ್ತಮ ಸಂಸ್ಕಾರಗಳನ್ನು ಕೊಟ್ಟು ಸ್ವಾಭಿಮಾನದ ಬದುಕನ್ನು ತಿಳಿಸಿಕೊಟ್ಟು ಹಕ್ಕುಗಳ ಹೋರಾಟದ ಕಿಚ್ಚು ಅವರಲ್ಲಿ ಬೆಳೆಸಬೇಕು. ಸಮಾಜದ ಒಗ್ಗಟ್ಟು ಕೆಡದಂತೆ ನೋಡಿಕೊಳ್ಳಬೇಕು ಒಗ್ಗಟ್ಟಿನಲ್ಲಿ ಶಕ್ತಿ ಇದೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತೊರೆದು ಒಂದು ಶ್ರೇಷ್ಠ ಕಾರ್ಯ ಸಾಧನೆಗಾಗಿ ಒಂದಾಗಿ ಕೆಲಸ ಮಾಡುವ ಅಗತ್ಯ ಇದೆ ಎಂದು ಕಿವಿಮಾತು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ್ ಡಾ.ವಿನಯಾ ಹೂಗಾರ ಮಾತನಾಡಿ ಅಂಬೇಡ್ಕರರು ಒಂದು ಜಾತಿಗೆ ಸೀಮಿತರಲ್ಲ. ಅವರು ಇಡೀ ದೇಶದ ಆಸ್ತಿಯಾಗಿದ್ದಾರೆ ಅವರ ಆದರ್ಶ ಬದುಕನ್ನು ನಾವೆಲ್ಲರೂ ಅನುಸರಿಸುವ ಅಗತ್ಯ ಇದೆ ಎಂದರು.  

2023-24ನೇ ಸಾಲಿನಲ್ಲಿ ತಾಲೂಕಿಗೆ ದ್ವಿತೀಯ ಪಿಯುಸಿ ಹಾಗೂ ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ತಾಲೂಕ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಹಶೀಲ್ದಾರ್ ಡಾ.ವಿನಯಾ ಹೂಗಾರ ಸಂವಿಧಾನ ಪೀಠಿಕೆ ಪಠಣ ಮಾಡಿದರು. ಪುರಸಭೆ ಅಧ್ಯಕ್ಷೆ ಜಬೇದಾ ಜಮಾದಾರ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಮಾಜ ಕಲ್ಯಾಣ ಇಲಾಖೆಯ ಶಿವಲಿಂಗ ಹಚಡದ, ತಾಪಂ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ, ಪಿಎಸ್‌ಐ ಆರ್‌.ಎಸ್‌.ಭಂಗಿ, ಸಮಾಜದ ಮುಖಂಡರಾದ ಎಸ್‌.ಬಿ.ಕಟ್ಟಿಮನಿ, ಮುತ್ತಪ್ಪ ಚಮಲಾಪೂರ, ಬಸವರಾಜ ಕಟ್ಟಿಮನಿ, ಜೈ ಭೀಮ ಮುತ್ತಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ರವಿ ಕಟ್ಟಿಮನಿ, ಶಾಂತಪ್ಪ ತಮದೊಡ್ಡಿ, ಮಹೇಶ್ ಚಲವಾದಿ, ಗುರುಪ್ರಸಾದ್ ಗೊಟಖಂಡಕಿ, ಸಿ.ಆರಿ​‍್ಸ.ರಾಜು ವಿಜಾಪುರ, ಸಮಾಜ ಕಲ್ಯಾಣ ಇಲಾಖೆಯ ಎಸ್‌.ಎನ್‌.ಮಲ್ಲಾಡೆ, ಎನ್‌.ವಿ.ಕೋರಿ.ಎಸ್‌.ಎಂ.ಕಲಬುರ್ಗಿ, ಎನ್‌.ಸಿ.ಗುಡಗುಂಟಿ, ಅನ್ನಪೂರ್ಣ ಪಾಟೀಲ, ವಿಶ್ವನಾಥ್ ಮಳಗಿ, ಮಂಜುನಾಥ ನರಸಣಗಿ, ನವೀನ ಇಜೇರಿ, ರಾಮನಗೌಡ ಬಂಟನೂರ, ಶ್ರೀನಿವಾಸ ಅಂಗಡಿ, ಸಂದೀಪ ಗೌಡರ, ಹಾಗೂ ಸಮಾಜದ ಗಣ್ಯರು ಹಿರಿಯರು ಇದ್ದರು.