ಛಲವಾದಿ ನಾರಾಯಣಸ್ವಾಮಿ ಮೇಲೆ ಹಲ್ಲೆ, ಅಕ್ರಮವಾಗಿ ಬಂಧನ ಖಂಡನೀಯ: ಐಹೊಳೆ
ರಾಯಬಾಗ 25: ಕಲಬುರ್ಗಿಯಲ್ಲಿ ಇತ್ತಿಚೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ, ದಲಿತ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ಮಾಡಿ, ಅಕ್ರಮವಾಗಿ ಬಂಧನ ಮಾಡಿರುವ ಘಟನೆಯನ್ನು ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುವುದಾಗಿ ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರ, ಗುಂಡಾಗಿರಿಯಲ್ಲಿ ಹೆಚ್ಚಿದ್ದು, ಸರ್ಕಾರ ನೈತಿಕತೆ ಕಳೆದುಕೊಂಡಿದೆ. ಪ್ರತಿಪಕ್ಷ ನಾಯಕರಿಗೆ ರಕ್ಷಣೆ ಕೊಡಲಾಗದ ಗೃಹ ಸಚಿವ ಡಾ.ಪರಮೇಶ್ವರ ಅವರು ಹಾಗೂ ಗೂಂಡಾವರ್ತನೆ ತೋರುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದ್ದ ಎಲ್ಲ ಯೋಜನೆಗಳನ್ನು ಸ್ಥಗೀತಗೊಳಿಸಿದೆ. ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ಎಸ್‌ಸಿ ಜನಾಂಗದವರಿಗೆ ನೀಡಬೇಕಿರುವ 40 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ರಾಜ್ಯದಲ್ಲಿ ಪೊಲೀಸ ವ್ಯವಸ್ಥೆ ಸಂಪೂರ್ಣ ವಿಫಲಗೊಂಡು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯಪಾಲರು ಮಧ್ಯಪ್ರವೇಶಿಸಿ ವಿರೋಧ ಪಕ್ಷದ ನಾಯಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಪಕ್ಷ ರೂಪಿಸಿರುವ ಚಾರ್ಜಸೀಟ್‌ನ್ನು ಬಿಜೆಪಿ ಮುಖಂಡರು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ, ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಭರತೇಶ ಬನವಣೆ, ಎಲ್.ಬಿ.ಚೌಗುಲೆ, ಅಮೃತ ಕುಲಕರ್ಣಿ, ಸದಾಶಿವ ಘೋರೆ್ಡ, ರಾಜಶೇಖರ ಖನದಾಳೆ, ಸದಾನಂದ ಹಳಿಂಗಳಿ, ಅಪ್ಪಾಸಾಬ ಬ್ಯಾಕೂಡೆ, ಮಹಾನಿಂಗ ಹಂಜಿ, ಸಂಗಣ್ಣ ದತ್ತವಾಡೆ, ಬಸವರಾಜ ಡೊಣವಾಡೆ ಹಾಗೂ ಬಿಜೆಪಿ ಮುಖಂಡರು ಇದ್ದರು.