ಬಳ್ಳಾರಿ: ವಿವಿಧೆಡೆ ಅನೀರೀಕ್ಷಿತ ಭೇಟಿ ನಡೆಸಿದ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ
ಬಳ್ಳಾರಿ 17: ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ ಅವರು, ಗುರುವಾರದಂದು ಬಳ್ಳಾರಿಯ ವಿವಿಧೆಡೆ ಅನೀರೀಕ್ಷಿತ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ, ವೇಣಿ ವೀರಾಪುರ ಬಳಿಯ ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕ, ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಮತ್ತು ಬಳ್ಳಾರಿ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಅನೀರಿಕ್ಷಿತವಾಗಿ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿ ಕುರಿತು ಪರೀಶೀಲಿಸಿದರು.
*ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ):*
ಮೊದಲಿಗೆ, ಗುರುವಾರ ಮುಂಜಾನೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗೆ ಭೇಟಿ ನೀಡಿದ ಅವರು, ಎಪಿಎಂಸಿಯಲ್ಲಿನ ವ್ಯಾಪಾರ ವಹಿವಾಟು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಪರೀಶೀಲನೆ ನಡೆಸಿದರು. ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಸಮಸ್ಯೆಗಳ ಬಗ್ಗೆ ಆಲಿಸಿದ ಉಪಲೋಕಾಯುಕ್ತರು, ವರ್ತಕರು ಖರೀದಿ ಮಾಡಿದ ತರಕಾರಿ ರಸೀದಿ ನೀಡ್ತಾರೆಯೇ ಎಂಬುದರ ಬಗ್ಗೆ ಕೆಲ ವರ್ತಕರ ಮತ್ತು ರೈತರ ಬಳಿ ವ್ಯಾಪಾರದ ಮಾಹಿತಿ ಪಡೆದುಕೊಂಡರು.
ರೈತರಿಂದ ಕಮಿಷನ್ ವಸೂಲಿ ಮಾಡಲು ಎಪಿಎಂಸಿ ಕಾಯ್ದೆಯಲ್ಲಿ ಅವಕಾಶ ಇಲ್ಲ. ಖರೀದಿದಾರರಿಂದ ಕೇವಲ ರೂ.2 ಕಮಿಷನ್ ಪಡೆಯಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ನೇರವಾಗಿ ರೈತರಿಂದಲೇ ರೂ.10 ವಸೂಲಿ ಮಾಡಲಾಗುತ್ತಿದೆ. ಇದು ಅಕ್ರಮ ಎಂದು ತಿಳಿಸಿದರು.
ವರ್ತಕರು ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡಿ ಹೆಚ್ಚುವರಿ ಕಮಿಷನ್‌ಗೆ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
*ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕ:*
ಬಳಿಕ ವೇಣಿ ವೀರಾಪುರ ಬಳಿಯ ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ ಅವರು, ಅಲ್ಲಿನ ನಿರ್ವಹಣೆ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಂದ ಮಾಹಿತಿ ಪಡೆದುಕೊಂಡರು.
84 ಎಕರೆ ವ್ಯಾಪ್ತಿಯಲ್ಲಿರುವ ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಸುಮಾರು 18 ವರ್ಷಗಳಿಂದ ಸರಿಯಾಗಿ ನಿರ್ವಹಣೆಯಾಗದಿರುವುದರ ಕುರಿತು ಬೇಸರ ವ್ಯಕ್ತಪಡಿಸಿದರು.
ಘಟಕದಲ್ಲಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಬೇಕು. ಅದನ್ನು ರೈತರಿಗೆ ನೀಡುವ ಮೂಲಕ ತೋಟಗಾರಿಕೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು. ಬಳ್ಳಾರಿ ನಗರದಲ್ಲಿ ಪ್ರತಿ ದಿನ ಸಂಗ್ರಹಣೆಗೊಳ್ಳುವ ಕಸವನ್ನು ವಿಂಗಡಿಸಿ ಇಲ್ಲಿಗೆ ಸರಬರಾಜು ಮಾಡಬೇಕು ಎಂದು ತಿಳಿಸಿದರು.
ಸರಿಯಾದ ನಿರ್ವಹಣೆ ಇಲ್ಲ, ಬೆಂಕಿ ಹೊತ್ತಿಕೊಂಡರೆ ಸಂಪೂರ್ಣ ಭಸ್ಮವಾಗುತ್ತದೆ. ಪಾಲಿಕೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು ಎಂದು ಸೂಚಿಸಿದರಲ್ಲದೇ, ಇಲ್ಲಿನ ಪರಿಸರದಿಂದ ಮನುಷ್ಯರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುತ್ತಿದೆಯೇ ಎಂದು ವಿಚಾರಿಸಿದರು.
*ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ:*
ನಂತರ ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರ್ಪ ಅವರು, ಅನೀರೀಕ್ಷಿತವಾಗಿ ಮಹಾನಗರ ಪಾಲಿಕೆಯ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಶಾಖೆಗಳ ಕಡತ ಹಾಗೂ ಇತರೆ ದಾಖಲೆಗಳ ಪರೀಶೀಲನೆ ನಡೆಸಿದರು.
ಪಾಲಿಕೆ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಮತ್ತು ನಗದು ಘೋಷಣಾ ವಹಿಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರಲ್ಲದೇ, ಸರಿಯಾಗಿ ನಿರ್ವಹಿಸದಿರುವ ಕುರಿತು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆಯೇ, ಒಂದು ವೇಳೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಅಂತವರಿಗೆ ನೋಟಿಸ್ ನೀಡಲಾಗಿದೆಯೇ?, ಇಲ್ಲಿಯವರೆಗೆ ಎಷ್ಟು ನೋಟಿಸ್‌ಗಳನ್ನು ನೀಡಿದ್ದೀರಿ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಪ್ರಶ್ನಿಸಿದರು.
ನಗರದಲ್ಲಿ ತೆರಿಗೆದಾರರಿಂದ ಸಕಾಲದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆಯೇ, ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆಯೇ ಎಂದು ವಿಚಾರಿಸಿದ ಅವರು, ನಗರದ ಹೋಟೆಲ್‌ಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಆದ್ಯತೆ ನೀಡುವಂತೆ ಪರಿಸರ ಇಂಜಿನಿಯರ್ ಅಧಿಕಾರಿಗಳಿಗೆ ಸೂಚಿಸಿದರು.
*ಬಳ್ಳಾರಿ ತಾಲ್ಲೂಕು ತಹಶೀಲ್ದಾರರ ಕಚೇರಿ:*
ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ತಹಶೀಲ್ದಾರರ ಕಚೇರಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ ಅವರು, ಕಚೇರಿಯ ವಿವಿಧ ದಾಖಲೆ ಕಡತಗಳನ್ನು ಪರೀಶೀಲಿಸಿದರು.
ಕಚೇರಿಯ ಸಿಬ್ಬಂದಿಗಳ ಹಾಜರಾತೆ ಪುಸ್ತಕ, ಚಲನ-ವಲನ ವಹಿ ಮತ್ತು ನಗದು ಘೋಷಣೆ ವಹಿ ಪುಸ್ತಕಗಳನ್ನು ವಿಸ್ತರವಾಗಿ ಪರೀಶೀಲನೆ ನಡೆಸಿದರು.
ಭೂಮಿ ಕೇಂದ್ರ, ಕಾವೇರಿ ತಂತ್ರಾಂಶ, ಪಹಣಿ ವಿತರಣೆ, ತಾಲ್ಲೂಕು ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿ ಕುರಿತಂತೆ ಅನೇಕ ಮಾಹಿತಿಯನ್ನು ತಹಶೀಲ್ದಾರ ಗುರುರಾಜ ಅವರಿಂದ ಪಡೆದುಕೊಂಡರು.
ಕಂದಾಯ ವಿಭಾಗದ ತಹಶೀಲ್ದಾರರು, ಶಿರಸ್ತೇದಾರರು, ಇತರೆ ಸಿಬ್ಬಂದಿಗಳು ತಪ್ಪದೇ ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಕಾಯ್ದೆ-ಕಾನೂನುಗಳ ಅಧ್ಯಯನ ಮಾಡಬೇಕು. ಸಾರ್ವಜನಿಕ ಸೇವೆ ಒದಗಿಸುವಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು ಹಾಗೂ ಮಾಹಿತಿ ನೋಂದಣಿಯನ್ನು ತಪ್ಪಿಲ್ಲದಂತೆ ನಮೂದಿಸಬೇಕು. ದಾಖಲೆಗಳಿಗಾಗಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ತಿಳಿಸಿದರು.
ಇದೇ ವೇಳೆ ತಹಶೀಲ್ದಾರ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಸಂವಾದ ನಡೆಸಿದ ಉಪಲೋಕಾಯುಕ್ತರು, ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಬೇಕು. ಸರ್ಕಾರ ಸಂಬಳ ನೀಡುತ್ತಿದೆ, ಲಂಚದ ಆಮೀಷಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪಿ.ಪ್ರಮೋದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಸಹಾಯಕ ನಿಬಂಧಕರಾದ ಶುಭವೀರ್ ಜೈನ್.ಬಿ., ಉಪ ನಿಬಂಧಕರಾದ ಅರವಿಂದ.ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯೂ ಆದ ರಾಜೇಶ್ ಎನ್.ಹೊಸಮನೆ, ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಸಿದ್ಧರಾಜು, ಡಿವೈಎಸ್ಪಿ ವಸಂತ ಕುಮಾರ್ ಸೇರಿದಂತೆ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಮತ್ತಿತರರು ಹಾಜರಿದ್ದರು.