ಬಳ್ಳಾರಿ: ಬೃಹತ್ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ: ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗಿ

'ಸ್ಪಷ್ಟ ಗುರಿ ಇರಲಿ ಇಷ್ಟಪಟ್ಟು ಓದಿ; ದೃತಿಗೇಡದೇ ಮುನ್ನುಗ್ಗಿ'

ಲೋಕದರ್ಶನ ವರದಿ

ಬಳ್ಳಾರಿ 20: "ಸ್ಪಷ್ಟ ಗುರಿ, ಕಷ್ಟಪಟ್ಟು ಓದಿ, ಯಾವುದಕ್ಕೂ ಎದೆಗುಂದದೇ ಮುನ್ನುಗ್ಗುವ ಛಾತಿ ಬೆಳೆಸಿಕೊಳ್ಳಿ' ''ಐಎಎಸ್ ಪಾಸಾಗುವುದಕ್ಕೆ ವಿಶೇಷ ಬುದ್ದಿವಂತಿಕೆ ಬೇಕಿಲ್ಲ; ಸಾಮಾನ್ಯ ಜ್ಞಾನವಿದ್ದರೇ ಸಾಕು,ಮಾರ್ಗದರ್ಶನ ಸದುಪಯೋಗಪಡಿಸಿಕೊಳ್ಳಿ. ಹೀಗೆ ಒಂದೇ ಎರಡೇ ಅನೇಕ ಸಲಹೆಗಳು ಮೂಡಿಬಂದಿದ್ದು ಐಎಎಸ್ ಮತ್ತು ಕೆಎಎಸ್ ಸಾಧಕರಿಂದ. ಜಿಲ್ಲಾಡಳಿತ,ಜಿಪಂ ಸಂಯುಕ್ತ ಆಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರದಲ್ಲಿ ಐಎಎಸ್ ಮತ್ತು ಕೆಎಎಸ್ ಪಾಸ್ ಆಗಿ ಸದ್ಯ ವಿವಿಧೆಡೆ ಕೆಲಸ ನಿರ್ವಹಿಸುತ್ತಿರುವ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಹೆಚ್ಚು ಸ್ಪರ್ಧಾಕಾಂಕ್ಷಿಗಳು ಇವರ ಸಲಹೆಗಳು ಹಾಗೂ ಪಠ್ಯಕ್ರಮ ಹಾಗೂ ಅಭ್ಯಸಿಸುವ ಬಗೆಯನ್ನು ತದೇಕಚಿತ್ತದಿಂದ ಆಲಿಸಿದರು. 

ಯುಪಿಎಸ್ಸಿ ಪರೀಕ್ಷೆಯಲ್ಲಿ 423ನೇ ರ್ಯಾಂಕ್ ಗಳಿಸಿದ ಸದ್ಯ ತರಬೇತಿಯಲ್ಲಿರುವ ಬಳ್ಳಾರಿಯ ಬಿ.ವಿ.ಅಶ್ವೀಜಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಧಕರ್ಯಾರು ಬೇರೆ ಗ್ರಹದಿಂದ ಆಗಮಿಸಿಲ್ಲ. ಅವರೆಲ್ಲ ಇಲ್ಲಿಯವರೆ. ಇಲ್ಲಿಯೇ ಇದ್ದು ಕಷ್ಟಪಟ್ಟು ಓದಿ ಸಾಧಿಸಿ ತೋರಿಸಿದ್ದಾರೆ ಎಂದರು. 

ಇದಕ್ಕೂ ಮುಂಚೆ ಮಾತನಾಡಿದ ಜಿಪಂ ಸಿಇಒ ಕೆ.ನಿತೀಶ್ ಅವರು ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಲ್ಲಿ ಯಶಸ್ವಿಯಾಗುವುದಕ್ಕೆ ಕಾಟಾಚಾರ ಪ್ರಯತ್ನ ಬೇಡ;ಗಂಭೀರ ಪ್ರಯತ್ನ ಅಗತ್ಯವಾಗಿದೆ ಎಂದು ಸ್ಪರ್ಧಾಕಾಂಕ್ಷಿಗಳಿಗೆ ಮನವರಿಕೆ ಮಾಡಿಕೊಟ್ಟರು. 

ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ತಹಸೀಲ್ದಾರರಾದ ಮಹಾಬಲೇಶ್ವರಪ್ಪ, ಆಶಪ್ಪ ಪೂಜಾರಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸುವ ಬಗೆ ಕುರಿತು ವಿವರಿಸಿದರು. 

ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಉಪನಿದರ್ೇಶಕ ರಾಜಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪಿ.ಶುಭಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ, ಜಿಲ್ಲಾ ಬಿಸಿಎಂ ಅಧಿಕಾರಿ ಸುರೇಶಬಾಬು, ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಅಮಿತ್ ಬಿದರಿ, ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾಂತೇಶ ಕವಠಗಿಮಠ ಸೇರಿದಂತೆ ಅನೇಕರು ಇದ್ದರು. ಕಾರ್ಯಾಗಾರಕ್ಕೆ ಆಗಮಿಸಿದ ಸಾವಿರಾರು ಸ್ಪರ್ಧಾಕಾಂಕ್ಷಿಗಳಿಗೆ ಐಎಎಸ್ ಪರೀಕ್ಷೆ ಪಠ್ಯಕ್ರಮದ ಕುರಿತು ಕಿರುಹೊತ್ತಿಗೆ ವಿತರಿಸಲಾಯಿತು.