ಬಳ್ಳಾರಿ: ಜನರನ್ನು ರಂಜಿಸಿದ 'ಗೌರ್ನಮೆಂಟ ಬ್ರಾಹ್ಮಣ' ನಾಟಕ

ಲೋಕದರ್ಶನ ವರದಿ

ಬಳ್ಳಾರಿ 27: ನಾಡಿನ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡರ 110ನೇ ಜಯಂತಿ ಸ್ಮರಣೆಯ 'ರಂಗಮುಂಗಾರು ನಾಟಕೋತ್ಸವ' ಆರಂಭವಾಯಿತು. ಬಳ್ಳಾರಿ ವಿಭಾಗೀಯ ಅಂಚೆ ಅಧೀಕ್ಷಕ ಕೆ.ಮಹಾದೇವಪ್ಪನವರು ರಂಗವಾದ್ಯ ವಾದನದ ಮೂಲಕ ನಾಟಕೋತ್ಸವಕ್ಕೆ ಚಾಲನೆ ನೀಡಿದರು. 

ರಂಗತೋರಣ, ರಾಮೇಶ ಟ್ರಸ್ಟ್, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಸಂಯುಕ್ತವಾಗಿ ಜುಲೈ ತಿಂಗಳಲ್ಲಿ ದೊಡ್ಡನಗೌಡರ ನೆನಪಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಂಗಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು 3 ದಿನ ರಂಗಮುಂಗಾರು ನಾಟಕೋತ್ಸವವನ್ನು ನಗರದ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ದೊಡ್ಡನಗೌಡ, ರಾಘವ ಹಾಗೂ ಗುರುದೇವ ರವೀಂದ್ರರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಕೆ.ಮಹಾದೇವಪ್ಪ ಮಾತನಾಡುತ್ತ, ಜೋಳದರಾಶಿಯ ದೊಡ್ಡನಗೌಡರ ಮನೆಗೆ ಭೇಟಿ ಇತ್ತದ್ದು ಅವಿಸ್ಮರಣೀಯವೆಂದರು. 

ಅವರ ಸಾಹಿತ್ಯ, ರಂಗಗೀತೆಗಳ ಕ್ಯಾಸೆಟ್ಗಳು, ಅವರು ಅನೂಚಾನವಾಗಿ ಬರೆದಿಟ್ಟಿರುವ ಘಟನಾವಳಿಗಳ ಡೈರಿ ಇವೆಲ್ಲ ಅಮೂಲ್ಯ ಆಸ್ತಿಗಳಾಗಿವೆ. ಇದರಿಂದ ಪ್ರಭಾವಗೊಂಡು ಇದೀಗ ಬಳ್ಳಾರಿಯಲ್ಲಿ ನಡೆಯುತಿರುವ ಬಳ್ಳಾರಿ ಪೆಕ್ಸ್ ಅಂಚೆಚೀಟಿ ವಸ್ತು ಪ್ರದರ್ಶನದಲ್ಲಿ ದೊಡ್ಡನಗೌಡರ ವಿಶೇಷ ಅಂಚೆ ಲಕೋಟೆಯನ್ನು ಹೊರತರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ ಎಂದರು. 

ದೊಡ್ಡನಗೌಡರ ಜೀವನ ಪರಿಚಯವನ್ನು ನಗರ ಪಿಯು ಕಾಲೇಜು ಉಪನ್ಯಾಸಕ ಎನ್.ಎಸ್.ವೇಣುಗೋಪಾಲ ಸೂಕ್ತವಾಗಿ ಮಾಡಿಕೊಟ್ಟರು. ಪ್ರತಿಷ್ಠಾನದ ಅಧ್ಯಕ್ಷ ಸಿದ್ದನಗೌಡರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜೋಳದರಾಶಿ ರಾಮೇಶ ಟ್ರಸ್ಟ್ನ ಅಧ್ಯಕ್ಷ ಕೆ.ಪೊಂಪನಗೌಡರು ಸುಂದರವಾಗಿ ನಿರೂಪಿಸಿದರು. 

ರಂಗತೋರಣ ಕಾರ್ಯದಶರ್ಿ ಕಪ್ಪಗಲ್ಲು ಪ್ರಭುದೇವ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ 'ರಂಗತೇರು' ನಾಟಕ ಪಯಣದ ಸಂಚಾಲಕ ನವೀನ್ ಕುಮಾರ ಭೂಮಿ ಇದ್ದರು. ಮಳೆಯ ಕಾರಣ ತುಸು ತಡವಾಗಿ ಕಾರ್ಯಕ್ರಮ ಆರಂಭವಾಯಿತು. ನಂತರ ಶಿವಮೊಗ್ಗ ರಂಗಾಯಣದ ಪ್ರೊ.ಅರವಿಂದ ಮಾಲಗತ್ತಿ ಜೀವನ ಆಧಾರಿತ, ಡಾ. ಎಂ.ಗಣೇಶ ಹೆಗ್ಗೋಡು ನಿರ್ದೇಶನದ ನಾಟಕ 'ಗೌರ್ನಮೆಂಟ ಬ್ರಾಹ್ಮಣ' ಪ್ರದರ್ಶ್ ನವಾಯಿತು.