ಸಂವಿಧಾನವು ರಾಷ್ಟ್ರದ ಭಾವೈಕ್ಯತೆಗೆ ಬುನಾದಿ: ಪ್ರೊ. ತ್ಯಾಗರಾಜ
ಬೆಳಗಾವಿ 28: ಸಮಾಜ ಮತ್ತು ಆಡಳಿತದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಎಲ್ಲ ದೋಷ ಮತ್ತು ನೂನ್ಯತೆಗಳನ್ನು ದೂರಮಾಡಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ನೀಡಿದ ಸಂವಿಧಾನವು ಸಮಸ್ತ ಭಾರತೀಯರನ್ನು ಒಂದು ಎಂಬ ಭಾವೈಕ್ಯತೆ ಮೂಡಿಸಿದೆ ಎಂದು ಆರ್‌ಸಿಯು ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಿಎಂ ಉಷಾ ಮೇರು ಸ್ಕೀಮ್, ಡಾ.ಅಂಬೇಡ್ಕರ್ ಅಧ್ಯಯನ ಪೀಠ ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹಯೋಗಲದಲ್ಲಿ ಸೋಮವಾರ ವಿವಿಯ ಕುವೆಂಪು ಸಭಾಭವನದಲ್ಲಿ ಏರಿ್ಡಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನ ಪ್ರಗತಿಗೆ ಪೂರಕ ಮತ್ತು ಅವಶ್ಯವಾಗಿದೆ. ಆದ್ದರಿಂದ ದೇಶದಲ್ಲಿ ದುರ್ಬಲರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ಸಮಾಜದ ಮುನ್ನೊಲೆಗೆ ಬರಲು ವಿವಿಧ ಅವಕಾಶ ಮತ್ತು ಸಲವತ್ತುಗಳನ್ನು ಕಲ್ಪಿಸಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗ ಮತ್ತು ವಿವಿಧ ಯೋಜನೆ ಮತ್ತು ಮೀಸಲಾತಿ ಮೂಲಕ ಅವರ ಉತ್ಥಾನದ ಮಹತ್ಕಾರ್ಯ ರಾಷ್ಟ್ರದಲ್ಲಿ ಸರಾಗವಾಗಿ ಸಾಗುತ್ತಿದೆ. ಸಂವಿಧಾನ ನೀಡಿದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಪ್ರಗತಿಯಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ ಎಂದರು.
ದೆಹಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಸಂಜೀವಕುಮಾರ ಎಚ್.ಎಂ ಮಾತನಾಡಿ, ಸಂವಿಧಾನ ರಚನೆ, ಅನುಷ್ಠಾನ ಮತ್ತು ಪಾಲನೆ ಈ ಎಲ್ಲ ಸಂಗತಿಗಳು ಭಿನ್ನ ಭಿನ್ನವಾಗಿವೆ. ಭಾರತದಲ್ಲಿ ಡಾ.ಅಂಬೇಡ್ಕರ್ ಅವರು ಉತ್ಕೃಷ್ಟವಾದ ಸಂವಿಧಾನವನ್ನು ರಚಿಸಿ, ನಮಗೆಲ್ಲರಿಗೂ ನೀಡಿದ್ದಾರೆ. ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸಂವಿಧಾನದ ಅನುಷ್ಠಾನ ಮತ್ತು ಪಾಲನೆ ಆಗುವ ಜವಾಬ್ದಾರಿಯು ನಮ್ಮೆಲ್ಲರ ಹೊಣೆಯಾಗಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ದೇಶದ ಎಲ್ಲ ಸವಲತ್ತು ಮತ್ತು ವ್ಯವಸ್ಥೆಗಳು ತಲುಪಿದಾಗ ಮಾತ್ರ ಸಂವಿಧಾನದ ಆಶಯ ಈಡೇರುವುದು ಎಂದರು.
ಕುಲಸಚಿವ ಸಂತೋಷ ಕಾಮಗೌಡ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಡಾ.ಅಂಬೇಡ್ಕರ್ ಪೀಠದ ನಿರ್ದೇಶಕ ಪ್ರೊ. ವೈ.ಎಸ್. ಬಲವಂತಗೋಳ, ಕಾರ್ಯಕ್ರಮದ ಸಂಯೋಜಕ ಡಾ. ಪ್ರಕಾಶ ಕಟ್ಟಿಮನಿ ಸೇರಿದಂತೆ ವಿವಿಯ ವಿವಿಧ ನಿಕಾಯದ ಡೀನರು, ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಸೀಮಾ ಕಾಂಬ್ಳೆ ಪ್ರಾರ್ಥಿಸಿದರು. ಡಾ. ಡಿ.ಜಿ. ಹನುಮಂತಪ್ಪ ಸ್ವಾಗತಿಸಿ ಪರಿಚಯಿಸಿದರು. ಪೂಜಾ ಕಾಂಬ್ಳೆ ನಿರೂಪಿಸಿದರು. ಪಿಎಂ ಉಷಾ ನೋಡಲ್ ಅಧಿಕಾರಿ ಪ್ರೊ. ಬಾಲಚಂದ್ರ ಹೆಗಡೆ ವಂದಿಸಿದರು.